
ಕಾರ್ಕಳ,ಆ.06: ತನ್ನ ಬದುಕಿನ ಉದ್ದಕ್ಕೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶೇಖರ್ ಅಜೆಕಾರ್ ಕೊಡುಗೆ ಅಪಾರ. ಸಮಾಜದ ಬಗ್ಗೆ ಅವರಿಗಿದ್ದ ಪರಿಕಲ್ಪನೆ, ವಿಚಾರವಂತಿಕೆ ಹಾಗೂ ಸೃಜನಶೀಲತೆ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ತನ್ನ ಬದುಕನ್ನೇ ಸಾಹಿತ್ಯ ಹಾಗೂ ಪತ್ರಿಕಾ ರಂಗಕ್ಕೆ ಮೀಸಲಿಟ್ಟ ಪತ್ರಕರ್ತ ಶೇಖರ್ ಅಜೆಕಾರ್ ಕನ್ನಡ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.
ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಾಣೂರಿನ ರಾಜರಾಜೇಶ್ವರಿ ನ್ಯಾಷನಲ್ ಸ್ಕೂಲ್-ಕಾಲೇಜಿನಲ್ಲಿ ಆ.06ರಂದು ಗುರುವಾರ ನಡೆದ ಡಾ. ಶೇಖರ್ ಅಜೆಕಾರು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ದಯಾನಂದ ಕುಂಟಾಡಿ ಪೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕನ್ನಡದ ಕಟ್ಟಾಳುವಾಗಿದ್ದ ಶೇಖರ ಅಜೆಕಾರ್ ಅವರೊಂದಿಗಿನ ನನ್ನ ಒಡನಾಟ ಇಂದು ನಿನ್ನೆಯದಲ್ಲ, ತನ್ನ ವೃತ್ತಿ ಬದುಕಿನಲ್ಲಿ ಹಣ ಗಳಿಕೆಯ ಯೋಚನೆಯೇ ಮಾಡದೇ ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕತೆಯಿಂದ ದುಡಿದ ಅವರು, ನೂರಾರು ದಿಗ್ಗಜ ವ್ಯಕ್ತಿಗಳ ಒಡನಾಟ ಹೊಂದಿದವರು. ದೂರದ ಮುಂಬಯಿಯಲ್ಲಿಯೂ ಕೂಡ ಸಾಕಷ್ಟು ಕನ್ನಡದ ಕಾರ್ಯಕ್ರಮ ನಡೆಸಿ ಕನ್ನಡ ಸಾಹಿತ್ಯಕ್ಕೆ ತನ್ನದೇ ಕೊಡುಗೆ ನೀಡಿದ್ದಾರೆ. ಅಜೆಕಾರಿನಲ್ಲಿ ಆದಿಗ್ರಾಮೋತ್ಸವ ಪರಿಕಲ್ಪನೆ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ವಿನೂತನ ಪ್ರಯತ್ನಗಳು ಅವರ ಸೃಜನಶೀಲತೆಗೆ ಸಾಕ್ಷಿಯಾಗಿವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕ್ವಾರಿ ಮತ್ತು ಕ್ರಶರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಸಿರಿವಂತಿಕೆ ಇಲ್ಲದಿದ್ದರೂ ವೃತ್ತಿ ಕ್ಷೇತ್ರದ ಮೂಲಕ ಸಮಾಜಕ್ಕೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಬಹುದು ಎಂಬುದನ್ನು ದಿ. ಶೇಖರ್ ಅಜೆಕಾರು ಮಾಡಿ ತೋರಿಸಿದ್ದಾರೆ. ಅವರನ್ನು ಸ್ಮರಿಸುವುದು ಉತ್ತಮ ಕಾರ್ಯವಾಗಿದೆ. ಸಮಾಜಮುಖಿ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ,ಕನ್ನಡ ಸಾಹಿತ್ಯ ಕ್ಷೇತ್ರಕ್ಕಾಗಿ ನಿಸ್ವಾರ್ಥ ಮನೋಭಾವದಿಂದ ದುಡಿದ ಡಾ. ಶೇಖರ್ ಅಜೆಕಾರು ಕನ್ನಡದ ಸಾಹಿತ್ಯ ಲೋಕದ ಆಸ್ತಿಯಾಗಿದ್ದರು.ಇದೀಗ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಕನ್ನಡ ಸಾಹಿತ್ಯಕ್ಕೆ ನೀಡಿದ ಗೌರವವಾಗಿದೆ ಎಂದರು.
ರಾಜರಾಜೇಶ್ವರಿ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಇದು ಆದರ್ಶ ಹಾಗೂ ಮಾದರಿ ಕಾರ್ಯಕ್ರಮವಾಗಿದೆ. ಪತ್ರಕರ್ತ ವೃತ್ತಿ ಪವಿತ್ರವಾದದ್ದು. ಪತ್ರಿಕಾ ಕ್ಷೇತ್ರ ಸಮಾಜಕ್ಕೆ ದೃಷ್ಟಿ ನೀಡುವ ಕ್ಷೇತ್ರವಾಗಿದೆ. ಪತ್ರಿಕೆ ಹಾಗೂ ಶಿಕ್ಷಣ ಎರಡೂ ಸವಾಲಿನ ಕ್ಷೇತ್ರಗಳಾಗಿವೆ. ಹೋಟೆಲ್‌ನಲ್ಲಿ ಮಸಾಲೆ ದೋಸೆಗೆ 70 ರೂಪಾಯಿ ನೀಡಲು ಹಿಂದೇಟು ಹಾಕುವುದಿಲ್ಲ ಆದರೆ ಜ್ಞಾನವನ್ನು ತುಂಬಿಸುವ ಪತ್ರಿಕೆಗೆ 10 ರೂಪಾಯಿ ನೀಡಲು ಹಿಂದೇಟು ಹಾಕುತ್ತೇವೆ ಎಂದ ಅವರು ಪತ್ರಿಕೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮದಾಗಬೇಕಿದೆ ಎಂದರು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಮಾತನಾಡಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ನಜೀರ್ ಪೊಲ್ಯ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಉದಯಕುಮಾರ್ ಮುಂಡ್ಕೂರು, ತಾಲೂಕು ಸಂಘದ ಕೋಶಾಧಿಕಾರಿ ಸತೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹರೀಶ್ ಆಚಾರ್ಯ ಅಭಿನಂದನಾ ಪತ್ರ ವಾಚಿಸಿದರು. ಹಿರಿಯ ಪತ್ರಕರ್ತ ದಯಾನಂದ ಪೈ ಕುಂಟಾಡಿ ಅವರಿಗೆ ಡಾ. ಶೇಖರ್ ಅಜೆಕಾರು ಅವರ ಹೆಸರಿನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ಡಾ. ಶೇಖರ್ ಅಜೆಕಾರು ಅವರ ಪತ್ನಿ ತಾರಾ ಅವರಿಗೆ ಕಿರು ಆರ್ಥಿಕ ನೆರವು ನೀಡಲಾಯಿತು.





.
.
.
.
.
.
.
.
.
.
.
.
.
.
.
.
.
.
.
.
