

ಬೆಂಗಳೂರು,ಸೆ.20: 2006ರ ಏಪ್ರಿಲ್ 1ಕ್ಕೂ ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದ ಹುದ್ದೆಗಳ 3,773 ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಳೆ ಪಿಂಚಣಿ ಯೋಜನೆಗೆ (OPS) ಸೇರ್ಪಡೆಗೊಳಿಸಲು ಕರ್ನಾಟಕ ಶಿಕ್ಷಣ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ .
ಬೆಂಗಳೂರು, ಮೈಸೂರು, ಧಾರವಾಡ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಒಟ್ಟು 3,773 ಶಿಕ್ಷಕರಿಗೆ ಅನುಕೂಲವಾಗಲಿದ್ದು, ಈ ಪೈಕಿ ಬೆಂಗಳೂರು-ಮೈಸೂರು ವಿಭಾಗದ 2,097 ಶಿಕ್ಷಕರು, ಧಾರವಾಡ ವಿಭಾಗದ 1,113 ಶಿಕ್ಷಕರು ಹಾಗೂ ಕಲಬುರಗಿ ವಿಭಾಗದ 563 ಶಿಕ್ಷಕರು ಒಪಿಎಸ್ ವ್ಯಾಪ್ತಿಗೆ ಒಳಪಡಲಿದ್ದಾರೆ. ಇದರ ಅನ್ವಯ 2006ರ ಏಪ್ರಿಲ್ 1ಕ್ಕೂ ಮುನ್ನ ಅಧಿಸೂಚನೆ ಹೊರಬಿದ್ದು, ನಂತರ ಕರ್ತವ್ಯಕ್ಕೆ ಹಾಜರಾದ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಹಳೆಯ ಡಿಫೈನ್ಡ್ ಪಿಂಚಣಿ ಸೌಲಭ್ಯ ಅನ್ವಯವಾಗಲಿದೆ. ಇವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 2-ಅ ಅನ್ವಯವಾಗುವುದಿಲ್ಲ ಬದಲಿಗೆ ಸಾಮಾನ್ಯ ಪಿಂಚಣಿಯ ಭಾಗ-4 ಅನ್ವಯವಾಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಅರ್ಹ ಶಿಕ್ಷಕರಿಗೆ ಎಚ್‌ಆರ್‌ಎಂಎಸ್-2.0 ತಂತ್ರಾAಶದಲ್ಲಿ ಪ್ರತೀ ತಿಂಗಳು ಕಡಿತವಾಗುತ್ತಿದ್ದ ಎನ್‌ಪಿಎಸ್ ವಂತಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ದೇಶಿಸಲಾಗಿದೆ. ಜೊತೆಗೆ, ಅವರಿಗೆ ನೂತನ ಜಿಪಿಎಫ್ ಖಾತೆಗಳನ್ನು ಸೃಜಿಸಲು ಹಾಗೂ ಈವರೆಗೆ ಅವರ ಪ್ರಾನ್ ಖಾತೆಯಲ್ಲಿ ಜಮೆಯಾಗಿರುವ ನೌಕರ ಮತ್ತು ಸರ್ಕಾರದ ವಂತಿಕೆಯ ಹಣವನ್ನು ನಿಯಮಾನುಸಾರ ಹಿಂಪಡೆದು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಡಿಡಿಪಿಐ ಹಾಗೂ ಬಿಇಒ ಗಳಿಗೆ ಶಿಕ್ಷಣ ಇಲಾಖೆಯ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರವು ಏಪ್ರಿಲ್ 1, 2006 ರಿಂದ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಈ ದಿನಾಂಕಕ್ಕೂ ಮುನ್ನವೇ ನೇಮಕಾತಿ ಪ್ರಕ್ರಿಯೆ ಆರಂಭಗೊಂಡು, ತದನಂತರ ಕೆಲಸಕ್ಕೆ ಸೇರಿದ ನೌಕರರು ತಮಗೆ ಹಳೆ ಪಿಂಚಣಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದ ಅನ್ವಯ ಶಿಕ್ಷಕರ ಸಂಘಟನೆಗಳು ನಡೆಸಿದ ಸುದೀರ್ಘ ಹೋರಾಟಕ್ಕೆ ಈಗ ಶಿಕ್ಷಣ ಇಲಾಖೆಯ ಆದೇಶದ ಮೂಲಕ ಅಧಿಕೃತ ಮುದ್ರೆ ಬಿದ್ದಿದೆ.





.
.
.
.
.
.
.
.
.
.
.
.
.
.
.
.
.
.
.
.
