
ಬೆಂಗಳೂರು,ಆ.07: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಈ ಕುರಿತು ತನ್ನ ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ತಿನ ಉಪ ಸಭಾಪತಿಯವರಿಗೆ ಸಲ್ಲಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಗಳಿಸಿದ್ದು, ಆದ್ದರಿಂದ ಸಭಾಪತಿ ಸ್ಥಾನವು ಕಾಂಗ್ರೆಸ್ ಪಕ್ಷದವರನ್ನೇ ಆರಿಸುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಪ್ರಮುಖ ನಾಯಕರು ಹೊರಟ್ಟಿ ಅವರನ್ನು ಭೇಟಿಯಾಗಿ, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿನಂತಿಸಿದ್ದರು. ರಾಜೀನಾಮೆ ನೀಡದೇ ಇದ್ದಲ್ಲಿ ಸಭಾಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಚಿಂತನೆ ನಡೆಸಿತ್ತು.
ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾದಲ್ಲಿ ಈ ನಿಲುವಳಿಯಲ್ಲಿ ಬಸವರಾಜ ಹೊರಟ್ಟಿಯವರಿಗೆ ಸೋಲಾಗುವ ಖಚಿತವಾದ ಹಿನ್ನಲೆಯಲ್ಲಿ ಸಭಾಪತಿ ಪೀಠದ ಘನತೆಗೆ ಧಕ್ಕೆಯಾಗಬಾರದು ಹಾಗೂ ಅನಗತ್ಯ ಮುಜುಗರವನ್ನು ತಪ್ಪಿಸಲು ಸ್ವಇಚ್ಛೆಯಿಂದ ಗೌರವಯುತವಾಗಿ ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನಿಸಿದ್ದಾರೆ.
ರಾಜೀನಾಮೆ ಪತ್ರ ಸಲ್ಲಿಕೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುದೀರ್ಘ 46 ವರ್ಷಗಳ ರಾಜಕೀಯ ಜೀವನದಲ್ಲಿ 18 ಮುಖ್ಯಮಂತ್ರಿಗಳನ್ನು ಹಾಗೂ ಹಲವು ಸಭಾಪತಿಗಳನ್ನು ನೋಡಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಸದನವನ್ನು ಪಕ್ಷಾತೀತವಾಗಿ ನಡೆಸಿಕೊಂಡು ಬಂದಿದ್ದೇನೆ. ಸರ್ಕಾರದ ನಿರ್ಧಾರ ಹಾಗೂ ಪೀಠದ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿ ಈ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದೇನೆ ಎಂದು ನೋವಿನಿಂದ ಹೇಳಿದರು. ಮುಂದಿನ ಆಗಸ್ಟ್ 14ರಂದು ನಡೆಯಲಿರುವ ಕಲಾಪದ ವೇಳೆ ಅವರು ಸದನವನ್ನು ಉದ್ದೇಶಿಸಿ ಮಾತುಗಳನ್ನಾಡಿ ಅಧಿಕೃತವಾಗಿ ನಿರ್ಗಮಿಸಲಿದ್ದು, ಅಮದು ಹೊಸ ಸಭಾಪತಿಯ ಆಯ್ಕೆ ನಡೆಯಲಿದೆ.





.
.
.
.
.
.
.
.
.
.
.
.
.
.
.
.
.
.
.
.
