
ಕಾರ್ಕಳ ಆಗಸ್ಟ್ 09: ರೈತರಿಗೆ ಸಹಕಾರಿ ಸಂಘಗಳ ಮೂಲಕ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲದ ಗರಿಷ್ಠ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿರುವ ಕುರಿತು ಸರ್ಕಾರ ಸ್ಪಷ್ಟವಾದ ಮಾಹಿತಿ ಮತ್ತು ಅನುಷ್ಠಾನದ ಮಾರ್ಗಸೂಚಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಭಾರತಿಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಹಲವು ವರ್ಷಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಮೂಲಕ ಅರ್ಹ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಕೃಷಿ ಸಾಲವನ್ನು ನೀಡಲಾಗುತ್ತಿದೆ. ಈ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ಕುರಿತು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿರುವುದಾಗಿ ಸಾರ್ವಜನಿಕವಾಗಿ ತಿಳಿದುಬಂದಿದೆ. 2023ರಲ್ಲಿಯೇ ಈ ಆದೇಶ ಪ್ರಕಟವಾಗಿದ್ದು,ಆದರೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ಕೃಷಿ ಸಾಲ ಲಭ್ಯವಿದೆ ಎಂಬ ಸಂದೇಶ ರೈತರಿಗೆ ತಲುಪುತ್ತಿರುವ ರೀತಿಗೂ, ವಾಸ್ತವವಾಗಿ ಹಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ವಿತರಣೆ ನಡೆಯುತ್ತಿರುವ ರೀತಿಗೂ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ರೈತರು ತಮ್ಮ ತಮ್ಮ ಸೊಸೈಟಿಗಳಿಗೆ ತೆರಳಿ 5 ಲಕ್ಷ ಸಾಲಕ್ಕಾಗಿ ವಿಚಾರಿಸುತ್ತಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ 3 ಲಕ್ಷದವರೆಗೆ ಮಾತ್ರ ಸಾಲ ನೀಡಲು ಸಾಧ್ಯವಾಗುತ್ತಿರುವ ಪರಿಸ್ಥಿತಿ ಕಂಡುಬರುತ್ತಿದ್ದು, ಇದರಿಂದ ರೈತರು ಮತ್ತು ಸಹಕಾರಿ ಸಂಘಗಳ ನಡುವೆ ಅನಗತ್ಯ ಗೊಂದಲ ಉಂಟಾಗುತ್ತಿದೆ.
ಆದ್ದರಿAದ ರಾಜ್ಯ ಸರ್ಕಾರವು ಈ ವಿಷಯವನ್ನು ತುರ್ತು ಆದ್ಯತೆಯಲ್ಲಿ ಪರಿಗಣಿಸಿ, ರೈತರು ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವ ಸ್ಪಷ್ಟ ಆದೇಶವನ್ನು ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಒತ್ತಾಯಿಸಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
