

ಬೆಂಗಳೂರು,ಸೆ. 26: ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆದವರು ಪ್ರಮೋಷನ್ ಸೇರಿದಂತೆ ಇತರೇ ಸೌಲಭ್ಯಗಳನ್ನು ನಿರಂತರವಾಗಿ ಪಡೆಯುವ ಹಕ್ಕನ್ನಾಗಿ ಪರಿಗಣಿಸಲು ಯಾವುದೇ ಅವಕಾಶವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕುಟುಂಬದ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಸರ್ಕಾರ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುತ್ತದೆ.ಅದರೆ ಇದನ್ನು ಭಡ್ತಿ ಸೇರಿದಂತೆ ಇತರೇ ಸೌಲಭ್ಯಗಳನ್ನು ಪಡೆಯಲು ಅವಕಾಶವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ಬೆಳಗಾವಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ನೌಕರರು ಸೇವೆಯಲ್ಲಿದ್ದಾಗಲೇ ನಿಧನರಾಗಿದ್ದರು. ಕುಟುಂಬದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿದ ಸರ್ಕಾರ ಅವರ ವಾರಸುದಾರರಿಗೆ 2018ರ ಮಾರ್ಚ್ 26 ರಂದು ಅದೇ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಅನುಕಂಪದ ಆಧಾರದಲ್ಲಿ ಕೆಲಸ ನೀಡಲಾಗಿತ್ತು. ಆದರೆ, ನೇಮಕಾತಿಯಾದ ಏಳು ತಿಂಗಳ ಬಳಿಕ ತಮ್ಮ ಉನ್ನತ ಶೈಕ್ಷಣಿಕ ಅರ್ಹತೆಯನ್ನು ಆಧಾರವಾಗಿಟ್ಟುಕೊಂಡು ಎಫ್‌ಡಿಎ ಹುದ್ದೆಗೆ ಬಡ್ತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರ ಈ ಮನವಿಯನ್ನು ತಿರಸ್ಕರಿಸಿದಾಗ ಅವರು KAT ಮೆಟ್ಟಿಲೇರಿದ್ದರು.
ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದ ಇಬ್ಬರು ನೌಕರರನ್ನು, ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಭಡ್ತಿ ನೀಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶಿಸಿತ್ತು. KAT ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು KAT ನೀಡಿದ್ದ ಆದೇಶವನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠವು, ಒಮ್ಮೆ ಅನುಕಂಪದ ಆಧಾರದ ಹುದ್ದೆಯನ್ನು ಸ್ವೀಕರಿಸಿದ ಮೇಲೆ, ಕೇವಲ ಹೆಚ್ಚಿನ ವಿದ್ಯಾರ್ಹತೆ ಇದೆ ಎಂಬ ಕಾರಣಕ್ಕೆ ಉನ್ನತ ಹುದ್ದೆಯನ್ನು ಪಡೆಯಲು ಅವಕಾಶವಿಲ್ಲ.ಉನ್ನತ ಶೈಕ್ಷಣಿಕ ಅರ್ಹತೆಯು ನಿರ್ದಿಷ್ಟ ಹುದ್ದೆಗೆ ಸೂಕ್ತ ಅರ್ಹತೆಯನ್ನು ನೀಡಬಹುದೇ ಹೊರತು, ಅನುಕಂಪದ ಯೋಜನೆಯಡಿ ಆ ಉನ್ನತ ಹುದ್ದೆಯನ್ನೇ ಪಡೆಯಬೇಕು ಎಂಬ ಕಾನೂನಾತ್ಮಕ ಹಕ್ಕನ್ನು ಯಾವತ್ತೂ ನೀಡುವುದಿಲ್ಲ ಎಂದು ನ್ಯಾಯಪೀಠ ಒತ್ತಿಹೇಳಿದೆ.
ಇದಲ್ಲದೇ, ಅರ್ಜಿದಾರರು 2018ರಲ್ಲಿ SDA ಹುದ್ದೆಯನ್ನು ಸ್ವೀಕರಿಸಿದ್ದು, ಸುಮಾರು ಆರು ವರ್ಷಗಳ ಸುದೀರ್ಘ ಅವಧಿಯ ಬಳಿಕ (2024ರಲ್ಲಿ) ಕೆಎಟಿ ಮೆಟ್ಟಿಲೇರಿದ್ದಾರೆ. ಆಡಳಿತಾತ್ಮಕ ನ್ಯಾಯಮಂಡಳಿಗಳ ಕಾಯ್ದೆಯ ಸೆಕ್ಷನ್ 21ರಡಿ ನಿಗದಿತ ಕಾಲಮಿತಿಯನ್ನು ಮೀರಿದ ಅರ್ಜಿಗಳಿಗೆ ಸಮರ್ಪಕ ಕಾರಣವಿಲ್ಲದೇ ಪರಿಹಾರ ನೀಡಲು ಸಾಧ್ಯವಿಲ್ಲ. ಈ ಹಿಂದೆ ಬೇರೆಯವರಿಗೆ ನಿಯಮಬಾಹಿರವಾಗಿ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಹುದ್ದೆ ಬದಲಾಯಿಸಿಕೊಡಲಾಗಿದೆ ಎಂಬ ಕಾರಣಕ್ಕೆ, ಅದನ್ನೇ ಆಧಾರವಾಗಿಸಿಕೊಂಡು ಮತ್ತೊಂದು ಕಾನೂನುಬಾಹಿರ ಕ್ರಮಕ್ಕೆ ಹಕ್ಕು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಅನುಕಂಪದ ನೇಮಕಾತಿ ವಿಷಯದಲ್ಲಿ ಸರ್ಕಾರವು ಸಂಬಂಧಿತ ನಿಯಮಗಳನ್ನು ಏಕರೂಪವಾಗಿ ಪಾಲಿಸಬೇಕು. ನಿಯಮಗಳಿಂದ ವಿಚಲಿತರಾಗಿ ಕೆಲವರಿಗೆ ಮಾತ್ರ ನೀಡುವ ಕಾನೂನುಬಾಹಿರ ಪ್ರಯೋಜನಗಳು ಮುಂದಿನ ದಿನಗಳಲ್ಲಿ ಅಸಮಾನತೆಗೆ ಹಾಗೂ ಅನಗತ್ಯ ನ್ಯಾಯಾಂಗ ವ್ಯಾಜ್ಯಗಳಿಗೆ ಕಾರಣವಾಗಲಿವೆ. ಅಲ್ಲದೇ, ಇದು ಆಡಳಿತಾತ್ಮಕ ಗೊಂದಲಗಳಿಗೆ ದಾರಿ ಮಾಡಿಕೊಟ್ಟು ಸಂವಿಧಾನದ ವಿಧಿ 14ರ (ಸಮಾನತೆಯ ಹಕ್ಕು) ಉಲ್ಲಂಘನೆಗೆ ಕಾರಣವಾಗಲಿದೆ ಎಂದು ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.





.
.
.
.
.
.
.
.
.
.
.
.
.
.
.
.
.
.
.
.
