

ಕರಾವಳಿನ್ಯೂಸ್ ವಿಶೇಷ
ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಳೆ (ಶುಕ್ರವಾರ) ಕರಾವಳಿಯ ಮಂಗಳೂರಿನಲ್ಲಿ ನಡೆಯಲಿರುವ ಚೊಚ್ಚಲ ಸಚಿವ ಸಂಪುಟ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದರೂ ಈ ಆಲೋಚನೆಯ ಹಿಂದೆ ರಾಜಕೀಯ ಲೆಕ್ಕಾಚಾರವೂ ಇರುವುದು ಅಷ್ಟೇ ಸತ್ಯ. ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಮೊದಲ ಬಾರಿಗೆ ಕರಾವಳಿ ಜಿಲ್ಲೆಗೆ ಬರುತ್ತಿರುವುದು ವಿಶೇಷ. ಒಂದು ದಿನದ ಮಟ್ಟಿಗೆ ಸರ್ಕಾರವನ್ನೇ ಕರಾವಳಿಗೆ ಶಿಫ್ಟ್ ಮಾಡಿದ್ದಾರೆ ಎಂದಾದರೆ ಆದರೆ ಇದರ ಹಿಂದಿನ ಲೆಕ್ಕಾಚಾರಗಳು ಕೂಡ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿದೆ.
ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸಿ ಅಲ್ಲಿಂದ ಸಿಎಂ ಡಿಕೆ ಶಿವಕುಮಾರ್ ನೇರವಾಗಿ ಬಿಜೆಪಿಯ ಭದ್ರಕೋಟೆ ಹಾಗೂ ಸುನಿಲ್ ಕುಮಾರ್ ಪ್ರತಿನಿಧಿಸುತ್ತಿರುವ ಕಾರ್ಕಳ ಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಹೆಬ್ರಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಇದೇ ವೇದಿಕೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕೂಡ ಭಾಗವಹಿಸಲಿದ್ದು ರಾಜ್ಯದ ದಿಗ್ಗಜ ನಾಯಕರಿಬ್ಬರ ಸಮಾಗಮಕ್ಕೆ ಮತ್ತೊಮ್ಮ್ಕೆ ವೇದಿಕೆ ಸಜ್ಜಾಗಿದೆ. ವಿಧಾನ ಸಭೆ ಅಧಿವೇಶನದಲ್ಲಿ ಡಿಕೆ ಶಿವಕುಮಾರ್ ಅವರಿಗೆ ತನ್ನ ಖಡಕ್ ಮಾತಿನಲ್ಲೇ ಇದಿರೇಟು ನೀಡಿ ಸರ್ಕಾರದ ಬೆವರಿಳಿಸುತ್ತಿದ್ದ ಸುನಿಲ್ ಕುಮಾರ್,ಡಿಕೆ ಶಿವಕುಮಾರ್ ಶುಕ್ರವಾರ ಮತ್ತೆ ಮುಖಾಮುಖಿಯಾಗಲಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಹೇಳಿಕೇಳಿ ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಹಲವು ದಶಕಗಳಿಂದಲೂ ಬಿಜೆಪಿಯ ಭದ್ರಕೋಟೆಯಾಗಿವೆ. ಕಳೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಟ್ಟು 13 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆದ್ದು ತೀವೃ ಮುಖಭಂಗ ಅನುಭವಿಸಿತ್ತು. ಇದಕ್ಕೆ ಕಾರಣ ಹಿಂದುತ್ವದ ಪ್ರಬಲ ಅಲೆ ಹಾಗೂ ಬಿಜೆಪಿ ಫೈರ್ ಬ್ರಾಂಡ್ ಸುನಿಲ್ ಕುಮಾರ್ ಅವರ ಸಮರ್ಥ ನಾಯಕತ್ವ. ಇದೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ 3 ದಶಕಗಳಿಂದ ನೆಲೆ ಕಂಡುಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷಕ್ಕೆ ಶತಾಯಗತಾಯ ಕರಾವಳಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಸ್ವತಃ ಡಿಕೆ ಶಿವಕುಮಾರ್ ಅವರೇ ಅಖಾಡಕ್ಕೆ ಇಳಿದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಸುನಿಲ್ ಕುಮಾರ್ ಹಿಂದೆಬಿದ್ದಿಲ್ಲ.ಇದಲ್ಲದೇ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರಸ್ತುತ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಅನುಭವಿ ಶಾಸಕನಾಗಿರುವ ಸುನಿಲ್ ಕುಮಾರ್, ರಾಜ್ಯಮಟ್ಟದ ಬಿಜೆಪಿ ನಾಯಕರಿಗೆ ಸರಿ ಸಮಾನಾಗಿ ಬೆಳೆಯುತ್ತಿದ್ದು ಅವರನ್ನು ಕಟ್ಟಿಹಾಕುವ ಲೆಕ್ಕಾಚಾರದಲ್ಲಿ ಡಿಕೆ ಶಿವಕುಮಾರ್ ಅವರು ರಣತಂತ್ರ ರೂಪಿಸುತ್ತಿದ್ದು, ಇದು ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
