

ಬೆಂಗಳೂರು,ಅ. 01: ರೇಷನ್ ಕಾರ್ಡ್ ಇ ಕೆವೈಸಿ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಆಹಾರ ಇಲಾಖೆಯು ಅನ್ನ ಸೇವೆ ಆಪ್ ಬಿಡುಗಡೆ ಮಾಡಿದೆ. ಈ ಮೂಲಕ ಮೊಬೈಲ್‌ನಲ್ಲಿ ಮನೆಯಲ್ಲಿಯೇ ಕುಳಿತು ಪ್ರಕ್ರಿಯೆಯನ್ನು ಮುಗಿಸಬಹುದಾಗಿದೆ. ಪ್ರಯೋಗಿಕವಾಗಿ ಉಡುಪಿ ಸೇರಿದಂತೆ 8 ಜಿಲ್ಲೆಗಳ ಫಲಾನುಭವಿಗಳಿಗೆ ಈ ಸೌಲಭ್ಯ ಜಾರಿ ಮಾಡಲಾಗಿದೆ.
ಈ ಅನ್ನ ಸೇವೆ ಆ್ಯಪ್ ಅನ್ನು ಇಂದು ಬೆಂಗಳೂರಿನ ಶಿವಾಜಿನಗರದ ಬ್ರಾಡ್ವೇನಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ್ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದರು. ಆ ಮೂಲಕ ಅನ್ನ ಸೇವೆ ಆ್ಯಪ್ನಲ್ಲಿ ಮೊಬೈಲ್ನಲ್ಲೇ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದ್ದು, ಇನ್ಮುಂದೆ ಜನರು ಕಚೇರಿಗೆ ಅಲೆಯುವುದು ತಪ್ಪಲಿದೆ.ಸದ್ಯ ಇದೊಂದು ಪೈಲಟ್ ಪ್ರಾಜೆಕ್ಟ್ ಆಗಿದ್ದು, 8 ಜಿಲ್ಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳ ಈ ಎಂಟು ಜಿಲ್ಲೆಗಳ ಜನರು ಇ-ಕೆವೈಸಿ ಮಾಡಲು ಅನುಕೂಲವಾಗಲಿದೆ. ಬಳಿಕ ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯವತಿಯಿಂದ ಹೊರಡಿಸಲಾದ ಕಾನೂನಿನಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಚೀಟಿ ಫಲಾನುಭವಿಗಳು ಪ್ರತಿ ಐದು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಬೇಕಾಗಿದೆ. ಕರ್ನಾಟಕದಲ್ಲಿ 5 ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿದ ಒಟ್ಟು 2,67,64,276 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಸೆಪ್ಟೆಂಬರ್ 20 ಕ್ಕೆ ಒಟ್ಟು 1,56,21,608 ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್/ಐರಿಸ್ ದೃಢೀಕರಣವನ್ನು ಬಳಸಿಕೊಂಡು ಮರು-ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ರಾಜ್ಯದಲ್ಲಿ ಇವರೆಗೆ ಒಟ್ಟು 3,82,362 ಫಲಾನುಭವಿಗಳು ಒಂದು ಬಾರಿಯು ಇ-ಕೆವೈಸಿ ಮಾಡಿರುವುದಿಲ್ಲ. ಅಂತಹ ಫಲಾನುಭವಿಗಳು ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ತಪ್ಪಿದಲ್ಲಿ ಮುಂದಿನ ಕ್ರಮಕೈಗೊಳಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
