

ಕಾರ್ಕಳ,ಅ.03: ಈ ಬಾರಿಯ ಮುಂಗಾರು ಮಳೆಯ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದ್ದು, ಬರದ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಕಾರ್ಕಳ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆ ಉಂಟಾಗದAತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಕಾರ್ಕಳ ಶಾಸಕರು ಹಾಗೂ ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಸ್ತೃತವಾಗಿ ಚರ್ಚಿಸಿದರು.
ಪ್ರಸ್ತುತ ಕಾರ್ಕಳ ನಗರಕ್ಕೆ ನೀರು ಸರಬರಾಜು ಮಾಡುವ ಮುಂಡ್ಲಿ ಜಲಾಶಯದ ನೀರಿನ ಸಂಗ್ರಹ ಹಾಗೂ ಇತರ ಜಲಮೂಲಗಳ ಪರ್ಯಾಯ ಬಳಕೆ ಹಾಗೂ ಅದಕ್ಕೆ ಪೂರಕವಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಲಭ್ಯವಿರುವ ನೀರಿನ ಸಂಪನ್ಮೂಲವನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಪ್ರಮುಖವಾಗಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಕಾರ್ಕಳದ ಐತಿಹಾಸಿಕ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಕಾರ್ಕಳ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಆಗಮಿಸುವ ಜನರಿಗೆ ಹಾಗೂ ಕಾರ್ಕಳ ನಗರದ ಪ್ರತಿಯೊಂದು ಮನೆಗಳಿಗೂ ನೀರಿನ ಸಂಪರ್ಕ ಒದಗಿಸುವ ಬಗ್ಗೆ ಯಾವುದೇ ತೊಂದರೆ ಉಂಟಾಗದAತೆ ಈಗಿನಿಂದಲೇ ಸಮಗ್ರ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಶಾಸಕರು ಸೂಚಿಸಿದರು.
ಅಮೃತ್ ಯೋಜನೆಯಡಿ ಈಗಾಗಲೇ ಕಾರ್ಕಳ ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ಬಗ್ಗೆ ಪೈಪ್ ಲೈನ್ ಅಳವಡಿಸಲಾಗಿದ್ದು, ಕೆಲವು ಕಡೆಗಳಲ್ಲಿ ಪೈಪ್ ಲೈನ್ ಸಂಪರ್ಕ ಆಗದಿರುವ ಬಗ್ಗೆ ಸಾರ್ವಜನಿಕ ದೂರುಗಳಿವೆ. ಈ ನಿಟ್ಟಿನಲ್ಲಿ ವಾರ್ಡುವಾರು ಸಮೀಕ್ಷೆ ನಡೆಸಿ ಎಷ್ಟು ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲು ಬಾಕಿ ಇದೆ ಎಂಬ ಮಾಹಿತಿಯನ್ನು ಕ್ರೋಡೀಕರಿಸಿ, ಬಾಕಿ ಇರುವ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಬಗ್ಗೆ ಕಾಲಮಿತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಅಮೃತ್ ಯೋಜನೆಯ ಮುಂದಿನ ದಿನಗಳ ನಿರ್ವಹಣೆ ಕುರಿತು ಸಮಗ್ರವಾಗಿ ಪರಿಶೀಲಿಸಿ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಪುರಸಭೆ ಹಾಗೂ ನಗರ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಕಳ ನಗರದ ಒಳಚರಂಡಿ ವ್ಯವಸ್ಥೆ ಯೋಜನೆಯ ನಿರ್ವಹಣೆಯ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ಮುಂದಿನ ವರ್ಷ ಸದ್ರಿ ಯೋಜನೆಯ ನಿರ್ವಹಣಾ ಅವಧಿ ಮುಗಿಯಲಿದ್ದು, ಒಳಚರಂಡಿ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕುರಿತು ಸಮಗ್ರ ವಿವರಗಳೊಂದಿಗೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಕುಂದಾಪುರ ಸಹಾಯಕ ಆಯುಕ್ತರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖಾ ಅಧಿಕಾರಿಗಳು ಮತ್ತು ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
