

ಕಾರ್ಕಳ,ಅ.08: ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿ ನಾಯಕರು, ಅದೇ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯಿಂದ ಸಂವಿಧಾನಕ್ಕೆ ಅಪಾಯ ಎದುರಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ವಾಗ್ದಾಳಿ ನಡೆಸಿದರು. ಕಾರ್ಕಳ ತಾಲೂಕು ಕಚೇರಿ ಪ್ರಜಾಸೌಧದ ಬಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ನಡೆದ ಬಿಜೆಪಿ ವಿರುಧ್ದ ನಡೆದ ಸತ್ಯಮೇವ ಜಯತೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಬಿಜೆಪಿಯವರೂ ಪಡೆಯುತ್ತಿದ್ದಾರೆ. ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸುವ ವಿಚಾರದಲ್ಲಿ ಕಾಂಗ್ರೆಸ್ ಆದ್ಯತೆ ನೀಡಿದೆ. ಅಂಗನವಾಡಿ ಸಹಾಯಕಿಯರ ಗೌರವಧನ ಹೆಚ್ಚಳ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವದ ಪರೇಡ್ನಲ್ಲಿ ಅವಕಾಶ ನೀಡದೆ ಬಿಜೆಪಿ ಅವಮಾನ ಮಾಡಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಕಾರ್ಕಳ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಮಹತ್ವದ ಕೊಡುಗೆ ನೀಡಿದೆ. ನೋಟು ಅಮಾನ್ಯೀಕರಣ, ಜಿಎಸ್ಟಿ, ಬೆಲೆ ಏರಿಕೆ ಹಾಗೂ ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದೆ. ಮತಗಳ್ಳತನ ಮತ್ತು ಎಸ್ಐಆರ್ ಸೇರಿದಂತೆ ವಿವಿಧ ವಿಚಾರಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದರು. ರಾಮನ ಹೆಸರಿನಲ್ಲಿ ಹಣ ಲೂಟಿ ಮಾಡಿದವರು ಬಿಜೆಪಿಗರು ಎಂದು ಆರೋಪಿಸಿದ ಅವರು, ಸಂವಿಧಾನವನ್ನು ಬದಲಾಯಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದರು. ಧರ್ಮ ಮತ್ತು ದೇವರ ಹೆಸರಿನಲ್ಲಿ ಮತ ಕೇಳುವ ಬಿಜೆಪಿ, ದೇಶದ ನಾಗರಿಕರ ಪೌರತ್ವವನ್ನೇ ಪ್ರಶ್ನಿಸುವ ಕೆಲಸ ಮಾಡುತ್ತಿದೆ ಎಂದರು.
ಕಾAಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮಾತನಾಡಿ, ಟೆಂಪಲ್ ಟೂರಿಸಂ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಸರಕಾರ ಕೊಡುಗೆ ನೀಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ ಒದಗಿಸಲಾಗುತ್ತಿದೆ. ಆದರೆ, ಕೇಂದ್ರದ ಬಿಜೆಪಿ ಸರಕಾರದ ನೀತಿಗಳಿಂದ ಬೆಲೆ ಏರಿಕೆಯಾಗಿದೆ ಎಂದು ಟೀಕಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಜನಧನ್ ಖಾತೆಗಳಿಗೆ ಕಪ್ಪುಹಣದ ಪಾಲು ಜಮೆಯಾಗಲಿದೆ ಎಂಬ ನಿರೀಕ್ಷೆ ಈಡೇರಿಲ್ಲ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿಯವರೇ ಯುವನಿಧಿ, ಭಾಗ್ಯಲಕ್ಷ್ಮೀ ಸೇರಿದಂತೆ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಮಾತನಾಡಿ, ರಾಜ್ಯ ಸರಕಾರವನ್ನು ‘ಜೀರೋ ಬ್ಯಾಲೆನ್ಸ್ ಸರಕಾರ’ ಎಂದು ಟೀಕಿಸುವ ಬಿಜೆಪಿ ನಾಯಕರಿಗೆ ಜ್ಞಾನವೇ ಶೂನ್ಯವಾಗಿದೆ ಎಂದು ವ್ಯಂಗ್ಯವಾಡಿದರು. ಎಸ್ಐಆರ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆಗಳನ್ನು ಎದುರಿಸುವಂತಾಗಿದೆ. ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು 600 ಕೋಟಿ ರೂ. ಹಣವನ್ನು ಜನರಿಗೆ ತಲುಪಿಸಲಾಗಿದೆ. ಕಾರ್ಕಳದ ಮಹಾಮಸ್ತಕಾಭಿಷೇಕಕ್ಕೂ ಕಾಂಗ್ರೆಸ್ ಸರಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಶಾಸಕರು ಗುದ್ದಲಿಪೂಜೆ ನೆರವೇರಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತಿರುವುದು ರಾಜ್ಯ ಸರಕಾರವೇ ಅಲ್ಲವೇ ಎಂದು ಪ್ರಶ್ನಿಸಿದರು.
ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ, 37 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರೆತಿದೆ. ಶಕ್ತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಸುಮಾರು 60 ಸಾವಿರ ಕುಟುಂಬಗಳಿಗೆ ಸರಕಾರ ನೆರವು ನೀಡುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗುವ ಮೂಲಕ ಜನರ ಬದುಕಿಗೆ ಆರ್ಥಿಕ ನೆರವು ಸಿಗುತ್ತಿದೆ ಎಂದರು.
ವಾಗ್ಮಿ ಲಕ್ಷ್ಮೀಶ್ ಕಮಲಡ್ಕ, ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶಂಕರ್ ಶೇರಿಗಾರ್, ಸುಧಾಕರ ಕೋಟ್ಯಾನ್, ರವಿಶಂಕರ್, ಬಿಪಿನ್ ಚಂದ್ರಪಾಲ್, ಶೇಖರ ಮಡಿವಾಳ, ವಿಶ್ವಾಸ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ಪ್ರದೀಪ್ ಬೆಲಾಡಿ ಕಾರ್ಯಕ್ರಮ ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
