

ನವದೆಹಲಿ,ಅ.21: ಭಾರತವನ್ನು ವಿಭಜಿಸಲು ಹೊಂಚು ಹಾಕುತ್ತಿರುವ ಶಕ್ತಿಗಳು ಮತ್ತು ದೇಶದ ಶತ್ರುಗಳನ್ನು ಮಟ್ಟಹಾಕಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮಂಗಳವಾರ ರಾಷ್ಟ್ರ ರಾಜಧಾನಿಯ ಇಂದ್ರಪ್ರಸ್ಥ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಜಯದಶಮಿ ಮಹೋತ್ಸವದಲ್ಲಿ ಪಾಲ್ಗೊಂಡು ದಸರಾ ಸಂದೇಶ ನೀಡಿದ ಅವರು, ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಾರುವ ಈ ಪವಿತ್ರ ಹಬ್ಬವು ಸತ್ಯ ಮತ್ತು ಧರ್ಮದ ಶಾಶ್ವತ ಶಕ್ತಿಯನ್ನು ನೆನಪಿಸುತ್ತದೆ ಎಂದು ಹೇಳಿದರು.
“ದೇಶದಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡಮಟ್ಟದ ಪಿತೂರಿಗಳು ನಡೆಯುತ್ತಿವೆ. ಭಾರತ, ಹಿಂದೂ ಸಮಾಜ ಹಾಗೂ ಸಂಘವನ್ನು ನಾಶಮಾಡಲು ದುಷ್ಟ ಶಕ್ತಿಗಳು ಹೊಂಚು ಹಾಕುತ್ತಿದ್ದು, ಕೆಲವರು ಅವರಿಗೆ ಸಾಥ್ ನೀಡುತ್ತಿದ್ದಾರೆ,” ಎಂದು ಎಚ್ಚರಿಸಿದ್ದರು.
ಪ್ರಭು ಶ್ರೀರಾಮನ ಆದರ್ಶಗಳು ಮತ್ತು ರಾಮಲೀಲೆಯ ಪರಂಪರೆಯು ದೇಶದ ಮೂಲೆ ಮೂಲೆಗಳಲ್ಲಿರುವ ಹಳ್ಳಿ ಹಾಗೂ ನಗರಗಳನ್ನು ಭಾವನಾತ್ಮಕವಾಗಿ ಒಗ್ಗೂಡಿಸುತ್ತಿದೆ ಎಂದ ಪ್ರಧಾನಿ, “ಇದು ಕೇವಲ ದೇಶಾದ್ಯಂತ ಆಚರಿಸಲ್ಪಡುವ ಸಾಂಪ್ರದಾಯಿಕ ಹಬ್ಬವಲ್ಲ, ಬದಲಾಗಿ ಇದು ಭಾರತದ ಜೀವನಾಡಿಯಾಗಿದೆ. ಅಧರ್ಮದ ಮೇಲೆ ಧರ್ಮದ ವಿಜಯವನ್ನು ಈ ಹಬ್ಬವು ನಿರಂತರವಾಗಿ ಜಗತ್ತಿಗೆ ಸಾರುತ್ತದೆ,” ಎಂದು ಪ್ರತಿಪಾದಿಸಿದರು.
ಬಡವರ, ಶೋಷಿತರ ಕಲ್ಯಾಣವೇ ಸರ್ಕಾರದ ಧ್ಯೇಯ
ತಮ್ಮ ಸರ್ಕಾರದ ಪ್ರಮುಖ ಆದ್ಯತೆ ಬಡವರು, ಹಿಂದುಳಿದವರು ಹಾಗೂ ಸಮಾಜದ ವಂಚಿತ ವರ್ಗಗಳ ಸಮಗ್ರ ಕಲ್ಯಾಣವಾಗಿದೆ ಎಂದು ಸ್ಪಷ್ಟಪಡಿಸಿದ ನರೇಂದ್ರ ಮೋದಿ, ಪ್ರಭು ಶ್ರೀರಾಮನ ಮೌಲ್ಯಗಳು, ಸಾಮಾಜಿಕ ಕಲ್ಯಾಣ ಹಾಗೂ ಸ್ವಾವಲಂಬನೆಯ ಮಾರ್ಗದಲ್ಲಿ ದೇಶ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.






.
.
.
.
.
.
.
.
.
.
.
.
.
.
.
.
.
.
.
.
