

ಬೆಂಗಳೂರು, ಅ.28: ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ಸಲುವಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶಾಲಾ-ಕಾಲೇಜು ಆವರಣ ಹಾಗೂ ಸುತ್ತಮುತ್ತಲಿನ 50 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೊಬ್ಬು, ಸಕ್ಕರೆ ಹಾಗೂ ಉಪ್ಪಿನಾಂಶವಿರುವ ಅನಾರೋಗ್ಯಕರ ಜಂಕ್ ಫುಡ್ಗಳ ಮಾರಾಟ, ಉಚಿತ ವಿತರಣೆ ಮತ್ತು ಜಾಹೀರಾತು ಪ್ರಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ.
ಜಂಕ್ ಫುಡ್ ನಿಷೇಧಕ್ಕೆ ಪ್ರಮುಖ ಕಾರಣವೇನು?
ಆರೋಗ್ಯ ಇಲಾಖೆಯು ಇತ್ತೀಚೆಗೆ ನಡೆಸಿದ ತಪಾಸಣೆ ವೇಳೆ ಬಹುತೇಕ ಶಾಲೆಗಳ ಕ್ಯಾಂಟೀನ್ಗಳಲ್ಲಿ ಬಿಳಿ ಬ್ರೆಡ್, ಪಾಸ್ತಾ ಹಾಗೂ ಸಂಸ್ಕರಿಸಿದ ಜಂಕ್ ಫುಡ್ಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು ಮಕ್ಕಳ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ದಿಢೀರ್ ಏರಿಕೆ ಮಾಡುತ್ತವೆ. ಇದರಿಂದ ಮಕ್ಕಳಲ್ಲಿ ಚುರುಕುತನ ಮತ್ತು ಏಕಾಗ್ರತೆ ಇಲ್ಲದೇ ಓದಿಗೆ ಅಡ್ಡಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ದಿನವಿಡೀ ಚುರುಕುತನ, ಉತ್ತಮ ಏಕಾಗ್ರತೆ ಮತ್ತು ಶಕ್ತಿ ಕಾಪಾಡಿಕೊಳ್ಳಲು ಪ್ರೋಟೀನ್ ಹಾಗೂ ಪೌಷ್ಟಿಕ ಕೊಬ್ಬು ಒಳಗೊಂಡ ಸಮತೋಲಿತ ಆಹಾರ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ಹೇರಲಾಗಿದೆ.
ಆವರಣದಲ್ಲಿ ಎಚ್ಚರಿಕೆ ಫಲಕ ಕಡ್ಡಾಯ: ನಿಯಮ ಮೀರಿದರೆ ಕಠಿಣ ಕ್ರಮ
ಶಾಲಾ ಆವರಣದೊಳಗೆ ಯಾವುದೇ ಜಂಕ್ ಫುಡ್ ಮಾರಾಟವಾಗದಂತೆ ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಪ್ರಮುಖ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಶಾಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗಡಿಗಳು, ಬೇಕರಿಗಳು, ಹೋಟೆಲ್ಗಳು ಮತ್ತು ಕ್ಯಾಂಟೀನ್ಗಳು ಆಹಾರ ಸುರಕ್ಷತಾ ಕಾಯ್ದೆಯಡಿ ಅಗತ್ಯ ನೋಂದಣಿ ಅಥವಾ ಪರವಾನಗಿ ಪಡೆದು ಸ್ವಚ್ಛತೆ ಕಾಪಾಡುವುದು ಕಡ್ಡಾಯ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ 2020ರ ನಿಯಮಾವಳಿಗಳ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದ್ದು,ನಿಯಮ ಮೀರಿ ಜಂಕ್ ಫುಡ್ ಮಾರಾಟ ಮಾಡುವುದು ಕಂಡುಬAದರೆ ಪರವಾನಗಿ ರದ್ದು ಹಾಗೂ ನ್ಯಾಯಾಂಗ ಕ್ರಮ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
