

ಬೆಂಗಳೂರು,ಅ. 29: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲೂ ರಚಿಸಲಾಗುವುದೆಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಅವರು ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ನೂತನ ಡ್ಯಾಶ್ಬೋರ್ಡ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಚಾಲನೆ ನೀಡಿ ಮಾತನಾಡಿ,ಸಮಿತಿಯ ಸದಸ್ಯರು ಫಲಾನುಭವಿಗಳೊಂದಿಗೆ ನೇರ ಸಂಪರ್ಕ ಹೊಂದಿ ಯೋಜನೆಗಳು ತಲುಪಲು ಶ್ರಮಿಸಬೇಕು ಎಂದು ಕರೆ ನೀಡಿದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಕುರಿತು ನಡೆಯುವ ಅಪಪ್ರಚಾರಗಳಿಗೆ ಕಡಿವಾಣ ಹಾಕಲು ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಾಲಕ್ಕೆ ನಿಖರ ಮಾಹಿತಿ ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಪ್ರತಿಯೊಂದು ಕುಟುಂಬವನ್ನು ತಲುಪಲು ವಿಶೇಷ ಅಭಿಯಾನ ರೂಪಿಸಲಾಗಿದೆ. ಅನುಷ್ಠಾನ ಸಮಿತಿಯ ಸದಸ್ಯರು ಪ್ರತಿಯೊಬ್ಬ ಫಲಾನುಭವಿಯ ಮನೆಗೆ ಭೇಟಿ ನೀಡಿ, ‘ಗ್ಯಾರಂಟಿ ಮನೆ’ ಎಂಬ ಸ್ಟಿಕ್ಕರ್ ಅಂಟಿಸಬೇಕು. ಈ ವೇಳೆ ಸರ್ಕಾರದಿಂದ ಅವರಿಗೆ ದೊರೆಯುತ್ತಿರುವ ಸೌಲಭ್ಯಗಳು ಹಾಗೂ ಅನುಕೂಲಗಳ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಶಿವಕುಮಾರ್ ನಿರ್ದೇಶನ ನೀಡಿದರು. ಎಲ್ಲಾ ಹಂತಗಳಲ್ಲೂ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು, ಸಾರ್ವಜನಿಕರ ಮಾಹಿತಿಗಾಗಿ gsdashboard.karnataka.gov.in ಡ್ಯಾಶ್ಬೋರ್ಡ್ ರೂಪಿಸಲಾಗಿದೆ ಎಂದರು. ಈ ಜಾಲತಾಣದಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾಡುತ್ತಿರುವ ಜಿಲ್ಲಾವಾರು ಹಾಗೂ ತಾಲೂಕುವಾರು ವೆಚ್ಚದ ವಿವರಗಳು, ಸರ್ಕಾರಿ ಆದೇಶಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ ಮಾಹಿತಿ ಲಭ್ಯವಿರಲಿದೆ. ಜೊತೆಗೆ, ಅನುಷ್ಠಾನ ಸಮಿತಿ ಸದಸ್ಯರು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ‘ಗ್ಯಾರಂಟಿ ಕಟ್ಟೆ’ ಎಂಬ ಹೊಸ ವೇದಿಕೆಯನ್ನು ಸೃಜಿಸಲಾಗುವುದು ಎಂದರು.





.
.
.
.
.
.
.
.
.
.
.
.
.
.
.
.
.
.
.
.
