

ಬೆಂಗಳೂರು,ನ.11: ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 15 ರಿಂದ 17 ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3 ರಿಂದ 7ಕ್ಕೆ ಹೆಚ್ಚಿಸಿರುವುದನ್ನು ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್ನ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. 2026ರ ಅಕ್ಟೋಬರ್ 27ರಂದು ಸರ್ಕಾರಿ ಆದೇಶಾನುಸಾರ ಅಕ್ಟೋಬರ್ 28ರಂದು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮಂಜೂರಾತಿ ನೀಡಲಾಗಿತ್ತು.
ಮೀಸಲಾತಿ ಹೆಚ್ಚಳವನ್ನು ಒಂಬತ್ತನೇ ಅನುಸೂಚಿಯಲ್ಲಿ ರಕ್ಷಣೆಕೋರಿ 2025 ರ ಡಿಸೆಂಬರ್ 18 ರಂದು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಅಂಗೀಕರಿಸಲಾಯಿತು. 2026 ರ ಫೆಬ್ರವರಿಯಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡಲು ಮಂಜೂರಾತಿ ನೀಡುವ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲಾಯಿತು. ಕೋರ್ಟ್ ತೀರ್ಪು ಬರುವವರೆಗೆ SC ಮತ್ತು ST ಅಭ್ಯರ್ಥಿಗಳಿಗೆ ಹೆಚ್ಚುವರಿ ಶೇಕಡಾ 6 ರಷ್ಟು ಹುದ್ದೆಗಳನ್ನು ಬ್ಯಾಕ್ಲಾಗ್ನಲ್ಲಿ ಕಾಯ್ದಿರಿಸಲಾಗಿದೆ, ಇದರಿಂದ ಈ ಪಾಲು ನಷ್ಟವಾಗದೆ ಸುರಕ್ಷಿತವಾಗಿರಲಿದೆ ಎಂದು ಸರ್ಕಾರ ವಿವರಿಸಿದೆ.
ಪರಿಶಿಷ್ಟ ಜಾತಿಗಳ ಒಳಗೆ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ತಲುಪುವಂತೆ ಮಾಡಲು ಒಳಮೀಸಲಾತಿಯನ್ನು ಜಾರಿಗೆ ತರಲಾಯಿತು. 2026 ರ ಅಕ್ಟೋಬರ್ 15 ರಂದು ಸಚಿವ ಸಂಪುಟ ಸಭೆಯಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಯಿತು ಮತ್ತು ತೀರ್ಪು ಬಂದ 16 ದಿನಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಲಾಯಿತು ಎಂದು ಸರ್ಕಾರ ಹೇಳಿದೆ.
ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗವು ಜುಲೈ 2020 ರಲ್ಲಿ ಮೀಸಲಾತಿ ಹೆಚ್ಚಳವನ್ನು ಶಿಫಾರಸು ಮಾಡಿ, ಈ ಹೆಚ್ಚಳವನ್ನು ಕಾನೂನು ಸವಾಲುಗಳಿಂದ ರಕ್ಷಿಸಲು ಸಂವಿಧಾನದ ಒಂಬತ್ತನೇ ಅನುಸೂಚಿಯಲ್ಲಿ (Ninth Schedule) ಸೇರಿಸಬೇಕೆಂದು ಸಲಹೆ ನೀಡಿತ್ತು. ಆದರೆ 2022 ರ ಅಕ್ಟೋಬರ್ 7 ರಂದು, ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಈ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಾಂಗ ವಿನಾಯಿತಿ ಇರುವ ಸಂವಿಧಾನದ ಒಂಬತ್ತನೇ ಅನುಸೂಚಿಯಲ್ಲಿ ಸೇರಿಸಲಾಗುವುದು ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ, ಬಿಜೆಪಿ ಸರ್ಕಾರವು ಒಂಬತ್ತನೇ ಅನುಸೂಚಿಯಲ್ಲಿ ಸೇರಿಸುವ ಬದಲಿಗೆ ಸುಗ್ರೀವಾಜ್ಞೆ ಹೊರಡಿಸಿ, 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಯ್ದೆ ಅಂಗೀಕರಿಸಿತು.
ಮತ್ತೊಂದೆಡೆ 2023 ರ ಮಾರ್ಚ್ 21 ರಂದು, ಅಂದಿನ ಚಿತ್ರದುರ್ಗದ ಬಿಜೆಪಿ ಸಂಸದ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅವರು ಕರ್ನಾಟಕದಿಂದ ಯಾವುದೇ ಪ್ರಸ್ತಾಪ ಕೇಂದ್ರಕ್ಕೆ ತಲುಪಿಲ್ಲ ಎಂದು ಸಂಸತ್ತಿಗೆ ತಿಳಿಸಿದರು. ಇದಾದ ಎರಡು ದಿನಗಳ ನಂತರ ಅಂದರೆ ಮತದಾನಕ್ಕೆ ಕೇವಲ ಏಳು ವಾರಗಳು ಬಾಕಿ ಇರುವಾಗ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗಗಳೊಂದಿಗೆ ಸಮಾಲೋಚನೆ ನಡೆಸುವುದು ಕಡ್ಡಾಯವಾಗಿತ್ತು ಮತ್ತು ಕಾನೂನು ಜಾರಿಯಾದ ನಂತರ ಕಳುಹಿಸಲಾದ ಪತ್ರಗಳು ಆ ಅಗತ್ಯವನ್ನು ಪೂರೈಸುವುದಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪು ನೀಡಿದೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದಾಗ, ಒಂದೇ ಒಂದು ಸಂವಿಧಾನ ತಿದ್ದುಪಡಿಯು ಈ ಹೆಚ್ಚಳಕ್ಕೆ ರಕ್ಷಣೆ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ಮಾಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.


































.
.
.
.
.
.
.
.
.
.
.
.
.
.
.
.
.
.
.
.
