ಉತ್ತರ ಪ್ರದೇಶ: ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಕುಂಭಮೇಳ ಪ್ರದೇಶದ ಸೆಕ್ಟರ್ 19ರಲ್ಲಿ ಎರಡು-ಮೂರು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಟೆಂಟ್ಗಳು ಹೊತ್ತಿ ಉರಿದಿದ್ದು, ಕುಂಭಮೇಳ ಪ್ರದೇಶದ ಸೆಕ್ಟರ್ 20ಕ್ಕೂ ಬೆಂಕಿ ವ್ಯಾಪಿಸಿದೆ. ಸದ್ಯ ಯಾವುದೇ ಸಾವು ನೋವು ಸಂಭವಿಸಿಲ್ಲ.
ಮಹಾಕುಂಭ ಮೇಳ ಆರಂಭಕ್ಕೂ ಮೊದಲೇ ನೂರಾರು ಅಗ್ನಿಶಾಮಕ ದಳ ನಿಯೋಜಿಸಲಾಗಿದೆ. ಹೀಗಾಗಿ ತಕ್ಷಣವೇ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಮಹಾಕುಂಭಮೇಳದ ಸೆಕ್ಟರ್ 19ರ ಬಳಿ 2 ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಸಂಜೆ 4.30ರ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಗೆ ಹಲವು ಟೆಂಟ್‌ಗಳಿಗೆ ಹಬ್ಬಿದೆ. ಸ್ಥಳದಿಂದ ಭಕ್ತರನ್ನು ತೆರವುಗೊಳಿಸಲಾಗಿದೆ. ಸ್ಥಳದಲ್ಲೇ ಅಗ್ನಿಶಾಮಕ ದಳಗಳ ಸೇವೆ ಲಭ್ಯವಿದ್ದ ಕಾರಣ ಬೆಂಕಿ ಆರಿಸುವ ಕಾರ್ಯ ನಡೆದಿದೆ ಎಂದು ಪ್ರಯಾಗರಾಜ್ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಹೇಳಿದ್ದಾರೆ.
ಇನ್ನು ಮಹಾಕುಂಭಮೇಳಕ್ಕೆ ಆಗಮಿಸುವ ಭಕ್ತರು ಉಳಿದುಕೊಳ್ಳಲು ಟೆಂಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಭಕ್ತರು ಹಣ ಪಾವತಿಸಬೇಕು. ಟೆಂಟ್‌ನಲ್ಲಿ ಇರುವುದರೊಂದಿಗೆ ಆಹಾರ ಮಾಡಿಕೊಳ್ಳುವುದಕ್ಕೂ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಿರುವಾಗ ಟೆಂಟ್ನಲ್ಲಿಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ.