
ಬೆಂಗಳೂರು,ಮೇ.28 : ಜಾತಿ ಗಣತಿಯ ಅಂತಿಮ ವರದಿಯು ರಾಜ್ಯ ಸರ್ಕಾರದ ಕೈಸೇರಿದ್ದು, ಈ ವರದಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 14ರಷ್ಟು ಮುಸ್ಲಿಂ ಜನಸಂಖ್ಯೆಯಿದ್ದು, 80.14 ಲಕ್ಷ ಜನಸಂಖ್ಯೆ ಹೊಂದಿರುವ ಮೂಲಕ ಮುಸ್ಲಿಂ ಸಮುದಾಯ ಪ್ರಥಮ ಸ್ಥಾನದಲ್ಲಿದೆ ಎಂದು ಸಿಎಂಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗವಾಗಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಅಂತಿಮ ಹಂತಕ್ಕೆ ಬಂದಿರುವ ನಡುವೆಯೇ ಸಿಎಂ ಸಿದ್ಧರಾಮಯ್ಯನವರು ತಮ್ಮ ರಾಜೀನಾಮೆಗೂ ಮುನ್ನ ಜಾತಿ ಗಣತಿಯ ಅಂತಿಮ ವರದಿಯನ್ನು ಸ್ವೀಕರಿಸಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಬುಧವಾರ ಸಲ್ಲಿಸಿದ ಜಾತಿ ಗಣತಿಯ ಅಂತಿಮ ವರದಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 32ರಿಂದ 42ಕ್ಕೆ ಹೆಚ್ಚಿಸಿ ಶಿಫಾರಸು ಮಾಡಿದೆ ಎನ್ನಲಾಗಿದೆ.
ಈ ವರದಿಯಲ್ಲಿ 13 ಅಧ್ಯಾಯ ಒಳಗೊಂಡಿದ್ದು, ಪ್ರತೀ ಜಾತಿ ಹೊಂದಿರುವ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ, ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅತೀಹೆಚ್ಚು ಅಂದರೆ ಶೇ. 14ರಷ್ಟಿದ್ದು, ನಂತರದ ಸ್ಥಾನದಲ್ಲಿ ವೀರಶೈವರು- ಲಿಂಗಾಯತರು, ಒಕ್ಕಲಿಗರು, ಕುರುಬ ಸಮುದಾಯ ಇದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎಂದು ತಿಳಿದುಬಂದಿದೆ.
ಮುಸ್ಲಿಂ ಸಮುದಾಯದ ನಂತರ ವೀರಶೈವ/ಲಿಂಗಾಯತ ಸಮುದಾಯದ ಜನಸಂಖ್ಯೆ 65 ಲಕ್ಷ ಇದ್ದು, ಜನಸಂಖ್ಯೆಯಲ್ಲಿ ಶೇ.11ರಷ್ಟು ಪಾಲು ಹೊಂದಿದೆ. ಒಕ್ಕಲಿಗರು 60 ಲಕ್ಷ ಇದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ. 10ರಷ್ಟಿದೆ. ಕುರುಬರು 45 ಲಕ್ಷ ಇದ್ದು, ಜನಸಂಖ್ಯೆಯಲ್ಲಿ ಶೇ.8ರಷ್ಟಿದ್ದಾರೆ ಎಂದು ತಿಳಿಸಲಾಗಿದೆ. ರಾಜ್ಯದ 6.14 ಕೋಟಿ ಜನರ ಪೈಕಿ 5.86 ಕೋಟಿ ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದರು. ಈ ಪೈಕಿ ಮುಸ್ಲಿಂ ಸಮುದಾಯದ ಸಂಖ್ಯೆ ಅತೀ ಹೆಚ್ಚು ಇರುವುದು ಗಮನಾರ್ಹವಾಗಿದೆ.
ಕಳೆದ ವರ್ಷ ರಾಜ್ಯಾದ್ಯಂತ ನಡೆಸಿದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ್ ಹಾಗೂ ಸದಸ್ಯರು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಈ ವೇಳೆ ಹಲವು ಸಚಿವರು, ಆಯೋಗದ ಸದಸ್ಯರು ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
