

ಕಾರ್ಕಳ, ನ. 21: ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ಅಂಡಾರು ಕೊಂದಲ್ಕೆ ಎಂಬಲ್ಲಿ ಸಂಭವಿಸಿದೆ.
ಈ ಅಪಘಾತದಲ್ಲಿ ವಾಹನ ಚಾಲಕ ಕಡ್ತಲ ಸೀತಾರಾಮ ರೈ(60) ಮೃತಪಟ್ಟಿದ್ದು, ಮಹಿಳಾ ಪ್ರಯಾಣಿಕರಾದ ವಸಂತಿ,ಲೀಲಾವತಿ, ಶಾಲಿನಿ,ಶೋಭಾ ಹಾಗೂ ಪ್ರೇಮ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಡ್ತಲದ ಹಪ್ಪನಡ್ಕ ಸದಾನಂದ ಶೆಟ್ಟಿ ಎಂಬವರ ಅಡಿಕೆ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುವ ವೇಳೆ ಈ ಅಪಘಾತ ಸಂಭವಿಸಿದ್ದು, ಅಂಡಾರಿನಿಂದ ಕಾಡುಹೊಳೆ ಮಾರ್ಗವಾಗಿ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು,ವಾಹನ ಮರಕ್ಕೆ ಡಿಕ್ಕಿಯಾದರೂ ವಾಹನಕ್ಕೆ ಹೆಚ್ಚಿನ ಹಾನಿಯಾಗಿಲ್ಲ ಹಾಗೂ ಚಾಲಕ ಸೀತಾರಾಮ ರೈಯವ ದೇಹಕ್ಕೆ ಯಾವುದೇ ಗಾಯಗಳಾಗಿಲ್ಲ. ವಾಹನ ಚಾಲನೆ ವೇಳೆ ತೀವ್ರ ಹೃದಯಾಘಾತದಿಂದ ವಾಹನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಅಜೆಕಾರು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
