
ಕಾರ್ಕಳ,ಜು.25: ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಕೃಷಿವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪಂಡಿತ ಪ್ರಶಸ್ತಿ ಬಹುಮಾನ ಯೋಜನೆಯಡಿ ರೈತರು ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ವಿನೂತನ, ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಕನಿಷ್ಠ 01 ಎಕ್ರೆ ಕೃಷಿ ಭೂಮಿ ಹೊಂದಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ಆಸಕ್ತ ರೈತರು ಹಾಗೂ ರೈತ ಮಹಿಳೆಯರು ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಎಫ್.ಐ.ಡಿ ಬಳಸಿಕೊಂಡು ಆ.31ರೊಳಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
2026-27ನೇ ಸಾಲಿನ ಕೃಷಿ ಪ್ರಶಸ್ತಿ – ಭತ್ತದ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರಿಂದ ಆನ್ ಲೈನ್ (Online) ಮುಖಾಂತರ ಅರ್ಜಿ ಆಹ್ವಾನಿಸಲಾಗಿದ್ದು, ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ಇಲಾಖಾ ವತಿಯಿಂದ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಪ್ರತಿ ಹಂತದಲ್ಲಿ 3 ಬಹುಮಾನಗಳನ್ನು ನೀಡಲಾಗುತ್ತಿದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಸ್ಪರ್ಧಿಗಳಿಂದ ಪಡೆಯಲಾಗುತ್ತಿದ್ದು, ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆಯಲ್ಲಿ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರು ಕೆ-ಕಿಸಾನ್ ಪೋರ್ಟಲ್ನಡಿ RSK Login ಅಥವಾ Citizen Login ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರೀಕ ಸೇವಾ ಕೇಂದ್ರ/ಸ್ವತಃ ಆಸಕ್ತ ರೈತ/ರೈತ ಮಹಿಳೆಯರು ಪ್ರತ್ಯೇಕವಾಗಿ ಅಗತ್ಯ ದಾಖಲಾತಿಗಳೊಂದಿಗೆ ರೈತರ FID ಯನ್ನು ಬಳಸಿಕೊಂಡು ಆನ್ಲೈನ್ ಮೂಲಕ ಆ.31 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಗುತ್ತಿದ್ದು, ತಾಲೂಕು ಮಟ್ಟದಲ್ಲಿ ಕ್ರಮವಾಗಿ ರೂ.15000, ರೂ.10000, ರೂ.5000 ನಗದು, ಜಿಲ್ಲಾ ಮಟ್ಟದಲ್ಲಿ ರೂ.30000, ರೂ.25000 ಮತ್ತು ರೂ.20000 ರೂ. ನಗದು ಹಾಗೂ ರಾಜ್ಯ ಮಟ್ಟದಲ್ಲಿ ರೂ.50000,ರೂ.40000 ಮತ್ತು ರೂ. 35000 ನಗದು ಬಹುಮಾನವನ್ನು ನೀಡಲಾಗುವುದು. ಕಳೆದ 05(ಐದು) ವರ್ಷದ ಅವಧಿಯಲ್ಲಿ ಕೃಷಿ ಪ್ರಶಸ್ತಿ ಬಹುಮಾನ ಪಡೆದ ರೈತರು ಹಾಗೂ ರೈತ ಮಹಿಳೆಯರು ಆ ಹಂತದ ಬೆಳೆ ಸ್ಪರ್ಧೆಯಲ್ಲಿ ಪುನಃ ಭಾಗವಹಿಸುವಂತಿಲ್ಲ. ಆದರೆ ಬೆಳೆಯ ಮೇಲಿನ ಹಂತದ ಸ್ಪರ್ಧೆಗೆ ಭಾಗವಹಿಸಲು ಅವಕಾಶವಿರುತ್ತದೆ. ಹಿಂದಿನ 5 ವರ್ಷಗಳಲ್ಲಿ ರಾಜ್ಯ ಮಟ್ಟದ ಬೆಳೆ ಸ್ಪರ್ಧೆಯಲ್ಲಿ ಯಾವುದೇ ಹಂತದ ಬಹುಮಾನ ಪಡೆದಿದ್ದರೆ ಅಂತಹ ರೈತರ ಅರ್ಜಿಯನ್ನು ತಿರಸ್ಕರಿಸಲಾಗುವುದು. ಬೆಳೆ ಸ್ಪರ್ಧೆಗೆ ಸ್ಪರ್ಧಿಸಲು ಕನಿಷ್ಟ 01 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿರಬೇಕು ಹಾಗೂ ರೆವಿನ್ಯೂ ದಾಖಲೆಯ ಪ್ರಕಾರ ಖಾತೆ ಹೊಂದಿರುವ ಸ್ವತಃ ಬೇಸಾಯದಲ್ಲಿ ತೊಡಗಿರುವ ಕ್ರಿಯಾಶೀಲ ರೈತರಾಗಿರಬೇಕು. ಕುಟುಂಬದ ಒಬ್ಬರು ಮಾತ್ರ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಆನ್ಲೈನ್ ಮುಖಾಂತರ ನೋಂದಾಯಿಸುವ ರೈತರು ಹಾಗೂ ರೈತ ಮಹಿಳೆಯರು ಇಲಾಖೆಯಿಂದ ಮಾರ್ಗಸೂಚಿಯನ್ವಯ ನಿಗದಿಪಡಿಸುವ ಸ್ಪರ್ಧಾತ್ಮಕ ಇಳುವರಿ ಮಟ್ಟಕ್ಕಿಂತ ಹೆಚ್ಚಿನ ಇಳುವರಿ ಪಡೆದಲ್ಲಿ ಮಾತ್ರ ಬೆಳೆ ಸ್ಪರ್ಧೆಯಡಿ ಬಹುಮಾನಕ್ಕೆ ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



.
.
.
.
.
.
.
.
.
.
.
.
.
.
.
.
.
.
.
.
