
ನವದೆಹಲಿ, ಜು.25: ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ಬೃಹತ್ ಪ್ರತಿಭಟನೆಗಳ ಬೆನ್ನಲ್ಲೇ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ಇಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದ ಸಿಜೆಪಿ ವಕ್ತಾರರು ತಮ್ಮ 3 ಬೇಡಿಕೆಗಳನ್ನು ಸಲ್ಲಿಸಿದ್ದರು. ಅದರಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೇ ಮೊದಲ ಮತ್ತು ಮುಖ್ಯವಾದ ಬೇಡಿಕೆಯಾಗಿತ್ತು. ಸಂಧಾನ ಮಾತುಕತೆಯ ವೇಳೆ ಉಳಿದ ಎರಡು ಬೇಡಿಕೆಗಳಿಗೆ ಕೂಡಲೇ ಒಪ್ಪಿಗೆ ಸೂಚಿಸಿದ್ದ ಕೇಂದ್ರ ಸಚಿವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಇಂದು (ಶನಿವಾರ) ಮಧ್ಯಾಹ್ನದವರೆಗೆ ಸಮಯ ಕೋರಿದ್ದರು.ಇದೀಗ ಕೊನೆಗೂ ಸಿಜೆಪಿ ಹಾಗೂ ಪ್ರತಿಭಟನಾಕಾರರ ಬೇಡಿಕೆಗೆ ಮಣಿದಿರುವ ಕೇಂದ್ರ ಸರ್ಕಾರ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆದಿದೆ. ಅಲ್ಲಿಗೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರ ಎಲ್ಲ ಬೇಡಿಕೆಗಳೂ ಈಡೇರಿದಂತಾಗಿದೆ.
ಧರ್ಮೇಂದ್ರ ಪ್ರಧಾನ್ ಅವರು ಹಿಂದಿಯಲ್ಲಿ ಬರೆದಿರುವ 2 ಪುಟಗಳ ರಾಜೀನಾಮೆ ಪತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ದೇಶದ ಯುವಕರ ಆಕಾಂಕ್ಷೆಗಳು, ಭಾವನೆಗಳು ಮತ್ತು ಸರಿಯಾದ ನಿರೀಕ್ಷೆಗಳ ಬಗ್ಗೆ ನನಗೆ ಆಳವಾದ ಗೌರವವಿದೆ. ಭಾರತದ ಯುವ ಪೀಳಿಗೆಯ ಕನಸುಗಳನ್ನು ನನಸಾಗಿಸುವುದು ನಮ್ಮ ರಾಜಕೀಯ ಮತ್ತು ಸಾಮಾಜಿಕ ಜೀವನದ ನೈತಿಕ ಸಂಕಲ್ಪವಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ದಾರ್ಶನಿಕ ನಾಯಕತ್ವದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದಕ್ಕಾಗಿ ನಾನು ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.” ಎಂದು ಅದರಲ್ಲಿ ಉಲ್ಲೇಖವಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
