
ನವದೆಹಲಿ, ಮೇ 12: ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಮೇ 3ರಂದು ನಡೆದಿದ್ದ ನೀಟ್ ಯುಜಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ರದ್ದುಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ನಿರ್ಧಾರ ಮಾಡಲಾಗಿದೆ.ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ತಿಳಿಸಿದೆ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.
ಕಳೆದ ಮೇ 3, 2026 ರಂದು ಭಾನುವಾರ ದೇಶಾದ್ಯಂತ ನೀಟ್ ಪರೀಕ್ಷೆ ನಡೆದಿತ್ತು. ಆದರೆ ರಾಜಸ್ಥಾನದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳು ಹರಿದಾಡಿದ್ದವು. ಈ ಬಗ್ಗೆ ಮೇ 8 ರಂದು ಎನ್‌ಟಿಎ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸ್ವತಂತ್ರ ಪರಿಶೀಲನೆ ನಡೆಸುವಂತೆ ಮನವಿ ಮಾಡಿತ್ತು.ಈ ಬಗ್ಗೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಗುಂಪು (SOG) ಈಗಾಗಲೇ ತನಿಖೆ ಆರಂಭಿಸಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪರೀಕ್ಷಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಲು ಕೇಂದ್ರ ಸರ್ಕಾರವು ಸಂಪೂರ್ಣ ತನಿಖೆಯನ್ನು ಸಿಬಿಐಗೆ (CBI) ವಹಿಸಿದೆ.
ಪರೀಕ್ಷೆಗಿಂತ ಮೊದಲೇ ‘ಗೆಸ್ ಪೇಪರ್’ (Guess Paper) ಹೇಗೆ ಹರಿದಾಡಿತು ಮತ್ತು ಇದರ ಹಿಂದೆ ಯಾವುದಾದರೂ ಸಂಘಟಿತ ಜಾಲವಿದೆಯೇ ಎಂಬ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 45 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ತನಿಖೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಮತ್ತು ದತ್ತಾಂಶಗಳನ್ನು ಹಂಚಿಕೊಳ್ಳುವ ಮೂಲಕ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.



.
.
.
.
.
.
.
.
.
.
.
.
.
.
.
.
.
.
.
.
