Share this news

ಉಡುಪಿ: ನಗರದ ಪ್ರಮುಖ ರಸ್ತೆ ಹಾಗೂ ಜಂಕ್ಷನ್ ಗಳಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ಕುರಿತು ಉಡುಪಿ ನಗರಸಭೆಯ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ಮೊದಲಿಗೆ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ವಿಜಯ ಕೊಡವೂರು ಅವರು, ಅಂಬಲಪಾಡಿ ಜಂಕ್ಷನ್ನಲ್ಲಿನ ಮೇಲ್ಸೇತುವೆ ಕಾಮಗಾರಿಯಿಂದ ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣ ಹಾಗೂ ಕಲ್ಸಂಕಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.ಆದರೆ ಟ್ರಾಫಿಕ್ ನಿರ್ವಹಣೆಯನ್ನು ಸರಿಯಾಗಿ ಮಾಡದೆ ತೊಂದರೆ ಆಗುತ್ತಿದೆ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ಅಂಬಲಪಾಡಿ, ಸಂತೆಕಟ್ಟೆ, ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲ ಕಡೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಹಾಕಲಾದ ಟ್ರಾಫಿಕ್ ಸಿಗ್ನಲ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ, ಅಭಿವೃದ್ಧಿ ಕಾಮಗಾರಿ ನಡೆಯುವಾಗ ಟ್ರಾಫಿಕ್ ಸಮಸ್ಯೆ ಆಗುವುದು ಸಾಮಾನ್ಯ. ಸುಗಮ ಸಂಚಾರಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದ ಸಂಚಾರ ವ್ಯವಸ್ಥೆ ಬಗ್ಗೆ ಹೊಸ ವಿನ್ಯಾಸವನ್ನು ತಯಾರಿಸಲಾಗುತ್ತಿದೆ. ಕಲ್ಸಂಕ ಜಂಕ್ಷನ್ನಲ್ಲಿ ಗುಂಡಿಬೈಲು ಕಡೆ ಲೆಫ್ಟ್ ಪ್ರೀ ಮಾಡಲು ಸ್ಟೀಲ್ ಬ್ರಿಜ್ಡ್ ನಿರ್ಮಿಸಲಾಗುತ್ತದೆ. ಇದರಿಂದ ಇಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡಬಹುದಾಗಿದೆ. ಇಲ್ಲಿನ ಸಿಗ್ನಲ್ ಲೈಟ್ಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *