ಧಾರವಾಡ : ಆನ್‌ಲೈನ್ ಫ್ಲಾಟ್‌ಫಾರ್ಮ್ ಮೂಲಕ ಮೊಬೈಲ್ ಬುಕ್ ಮಾಡಿದ್ದ ವಿದ್ಯಾರ್ಥಿಗೆ ಬೇರೆ ಕಂಪನಿಯ ಕಡಿಮೆ ಮೊತ್ತದ ಮೊಬೈಲ್ ಕೊಟ್ಟು ವಂಚನೆ ಮಾಡಿದ ಪ್ರಕರಣದ ಕುರಿತಂತೆ ಆನ್‌ಲೈನ್ ಮಾರಾಟ ಸಂಸ್ಥೆಯಾದ್ ಅಮೆಜಾನ್ ಕಂಪನಿಗೆ ಗ್ರಾಹಕ ಆಯೋಗವು ದಂಡ ವಿಧಿಸಿದೆ.
ಹುಬ್ಬಳ್ಳಿಯ ಪ್ರತೀಕ್ ಗುಡಿಸಾಗರ ವಂಚನೆಗೆ ಒಳಗಾದ ವಿಧ್ಯಾರ್ಥಿ. ಪ್ರತೀಕ್ ತನ್ನ ವ್ಯಾಸಂಗಕ್ಕಾಗಿ ಅಮೆಜಾನ್ ಮುಖಾಂತರ ರೆಡ್ ಮಿ ನೋಟ್-13 ಪ್ರೋ + ಮೊಬೈಲನ್ನು ರೂ.24,999 ಗಳಿಗೆ ಬುಕ್ ಮಾಡಿದ್ದರು. ಆದರೆ ಪ್ರತೀಕ್ ಬುಕ್ ಮಾಡಿದ ಮೊಬೈಲ್ ಬದಲಾಗಿ ಬೇರೆ ಇನ್ನೊಬ್ಬರು ಬುಕ್ ಮಾಡಿದ ಕಡಿಮೆ ಮೊತ್ತದ ಸ್ಯಾಮಸಂಗ್ ಗ್ಯಾಲಕ್ಷಿ ಮೊಬೈಲನ್ನು ನೀಡಲಾಗಿತ್ತು. ಇದರಿಂದ ತನಗೆ ಸೇವಾ ನ್ಯೂನ್ಯತೆಯಾಗಿದೆ ಅಮೆಜಾನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರತೀಕ್ ಸಲ್ಲಿಸಿದ್ದ ದೂರಿನ ಕುರಿತು ಸಮಗ್ರ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ದೂರುದಾರರ ದಾಖಲೆಗಳನ್ನು ಪರಿಶೀಲಿಸಿ ರೂ.24,999 ಪಾವತಿಸಿ ಆನ್‌ಲೈನ್ ಮುಖಾಂತರ ಎದುರುದಾರರ ಬಳಿ ರೆಡ್ ಮಿ ನೋಟ್ ಮೊಬೈಲ್ ಖರೀದಿಸಿರುವುದು ಆಯೋಗದ ಗಮನಕ್ಕೆ ಕಂಡುಬAದಿರುತ್ತದೆ. ಎದುರುದಾರರು ನೀಡಿದ್ದ ಮೊಬೈಲ್ ಬೇರೆ ಇರುವುದನ್ನು ಗಮನಿಸಿದ ಆಯೋಗ ಎದುರುದಾರರು ಸೇವಾ ನ್ಯೂನ್ಯತೆ ಎಸಗಿರುವರೆಂದು ಅಭಿಪ್ರಾಯಪಟ್ಟು ಆದೇಶವಾದ 15 ದಿನಗಳ ಒಳಗಾಗಿ ದೂರುದಾರರು ಬುಕ್ ಮಾಡಿದ ಮೊಬೈಲನ್ನು ಕೊಡುವಂತೆ ಹಾಗೂ ತಪ್ಪಿದ್ದಲ್ಲಿ ಅದರ ಹಣ ರೂ.24,999 ಗಳನ್ನು ಶೇ. 10 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಎದುರುದಾರರಿಗೆ ಆದೇಶಿಸಿದೆ.