
ಬೆಂಗಳೂರು, ಮೇ.30: ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಸಿಎಂ ಹೆಸರು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಸಿಎಂ ಆಗುವುದು ನಿಶ್ಚಿತವಾಗಿತ್ತು. ಆದರೆ ಪ್ರಕ್ರಿಯೆಯಂತೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ನೂತನ ನಾಯಕನ ಆಯ್ಕೆ ಅಧಿಕೃತವಾಗಿ ಇಂದು ನಡೆದಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ಸರ್ಕಾರದಲ್ಲಿ 3 ವರ್ಷಗಳ ಕಾಲ ಡಿ.ಕೆ. ಶಿವಕುಮಾರ್ ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.
ಸಿಎಲ್ಪಿ ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ. ಶಿವಕುಮಾರ್ ಆಯ್ಕೆ ಸಂಬAಧ ಸಿದ್ದರಾಮಯ್ಯ ನಿರ್ಣಯ ಮಂಡನೆ ಮಾಡಿದ್ದು, ಇದನ್ನು ಜಿ. ಪರಮೇಶ್ವರ್ ಅನುಮೋದಿಸಿದ್ದಾರೆ. ಎಲ್ಲ ಶಾಸಕರು ಈ ತೀರ್ಮಾನವನ್ನು ಸರ್ವಾನುಮತದಿಂದ ಒಪ್ಪಿದ್ದಾರೆ. ಸಭೆಯಲ್ಲಿ ವೀಕ್ಷಕರಾಗಿ ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗಿಯಾಗಿದ್ದರು.
ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿ ಮಾರ್ಗದರ್ಶನ ಮತ್ತು ಶುಭ ಮುಹೂರ್ತದ ಆಧಾರದ ಮೇಲೆ ಈ ದಿನಾಂಕ ಫೈನಲ್ ಆಗಿದೆ. ಯಾವುದೇ ಆಡಂಬರವಿಲ್ಲದೇ ಲೋಕಭವನದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
