ಕಾರ್ಕಳ: ರಾಷ್ಟ್ರೀಯ ಹೆದ್ದಾರಿ-169 ಸಾಣೂರು ಪುಲ್ಕೇರಿ ಬೈಪಾಸ್ ಜಂಕ್ಷನ್‌ನಿAದ ಮಾಳ ಅರಣ್ಯ ಗೇಟ್‌ವರೆಗೆ 15 ಕಿ.ಮೀ ವ್ಯಾಪ್ತಿಯ ಭೂಮಾಲಕರಿಗೆ ಪರಿಹಾರಧನ ವಿತರಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಾರತಮ್ಯ ಧೋರಣೆ ಅನುಸರಿಸಿದೆ. ಎಲ್ಲಾ ಭೂಮಾಲಕರು ಪರಿಹಾರ ಮೊತ್ತ ಪಡೆಯಲು ಸಹಮತ ಸೂಚಿಸಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಭೂಮಾಲಕರಿಗೆ ಪರಿಹಾರ ಮೊತ್ತವನ್ನು ಸಮರ್ಪಕವಾಗಿ ವಿತರಿಸುವಲ್ಲಿ ಸರಕಾರ ವಿಫಲವಾಗಿದ್ದು, ದರಕ್ಕಿಂತ ಕಡಿಮೆ ಮೊತ್ತದ ಪರಿಹಾರ ವಿತರಿಸುವಲ್ಲಿ ಮುಂದಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ 169-ಭೂ ಮಾಲಕರ ಹೋರಾಟ ಸಮಿತಿಯ ಪ್ರಮುಖ ಸಾಣೂರು ಜಾನ್ ಡಿಸಿಲ್ವ ಆರೋಪಿಸಿದ್ದಾರೆ.
ಅವರು ಹೊಟೇಲ್ ಪ್ರಕಾಶ್‌ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 169 ಸಾಣೂರು, ಮಿಯಾರು, ಮುಡಾರು, ಮಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಹುತೇಕ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಇನ್ನೂ ಕೂಡ ಭೂಮಾಲಕರಿಗೆ ನ್ಯಾಯಯುತ ಪರಿಹಾರ ದೊರಕಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ-169 ಅಭಿವೃದ್ಧಿ ಕಾರ್ಯದ ವೇಳೆಗೆ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅತಿ ಕನಿಷ್ಟ ಬೆಲೆಯನ್ನು ನಿರ್ಧರಿಸಲಾಗಿದೆ ಎಂದರು.
ಹೆದ್ದಾರಿ ಬದಿಯಲ್ಲಿರುವ ಕೆಲವು ಜಮೀನುಗಳಿಗೆ ಇನ್ನೂ ಭೂಸ್ವಾಧೀನಕ್ಕೆ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಸಾಣೂರಿನಿಂದ ಕುಲಶೇಖರದವರೆಗೆ ಪರಿಹಾರ ಮೊತ್ತ ನಿರ್ಧರಿಸಲು ಅನುಸರಿಸಿದ ನಿಯಮಗಳನ್ನು ನಮ್ಮ ಗ್ರಾಮಗಳಲ್ಲಿ ಪಾಲಿಸದೆ, ಅತಿ ಕಡಿಮೆ ಬೆಲೆ ಹಾಕಿ ಅವಾರ್ಡ್ ನೋಟಿಸ್ ಕಳುಹಿಸಿರುತ್ತಾರೆ. ಜಿಲ್ಲಾಧಿಕಾರಿ, ಸಹಾಯಕ ಉಪಾಯುಕ್ತರು, ಶಾಸಕರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಭೂ ಮಾಲೀಕರ ಸಭೆ ಕರೆದಿದ್ದು, ಅದರಲ್ಲಿ ನಮಗೆ ಅತಿ ಕಡಿಮೆ ಪರಿಹಾರ ಮೊತ್ತದ ಅವಾರ್ಡ್ ನೋಟಿಸ್ ಬಂದಿದ್ದು, ಇದರಿಂದ ನಮಗಾಗುವ ತೊಂದರೆ ಮತ್ತು ಅನ್ಯಾಯವನ್ನು ಅವರ ಗಮನಕ್ಕೂ ತರಲಾಗಿದೆ. ಆದರೂ ಈವರೆಗೆ ಸೂಕ್ತ ಸ್ಪಂದನೆ ಲಭಿಸಿಲ್ಲ ಎಂದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ವಿರೋಧವಿಲ್ಲ. ಆದರೆ ಪಕ್ಕದ ಸಾಣೂರಿನಿಂದ ಕುಲಶೇಖರರಾಷ್ಟ್ರೀಯ ಹೆದ್ದಾರಿ-169 ನಮ್ಮದೇ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದು, ಅವರಿಗೆ ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ ನೀಡಿರುವ ಪರಿಹಾರ ಮೊತ್ತವನ್ನು ನಮಗೆ ನೀಡದೆ ಅನ್ಯಾಯವೆಸಗಲಾಗಿದೆ. ಈ ತಾರತಮ್ಯದ ಧೋರಣೆಯನ್ನು ವಿರೋಧಿಸುತ್ತಿದ್ದು, ಯಾವುದೇ ಕಾರಣಕ್ಕೂ ನ್ಯಾಯಯುತವಾದ ಪರಿಹಾರ ದೊರಕದಿದ್ದಲ್ಲಿ ನಾವು ನಮ್ಮ ಜಮೀನನ್ನು ಬಿಟ್ಟು ಕೊಡಲಾರೆವು. ಜಿಲ್ಲಾಧಿಕಾರಿ ಹಾಗೂ ಇಲಾಖೆ ಅಧಿಕಾರಿಗಳು ಅದಕ್ಕೆ ಅವಕಾಶ ನೀಡದೆ, ನಮಗೆ ರಾಷ್ಟ್ರೀಯ ಹೆದ್ದಾರಿ-169ರ ನಿಯಮಗಳಿಗನುಗುಣವಾಗಿ ಕಾನೂನಿನ ಚೌಕಟ್ಟಿನೊಳಗೆ ನ್ಯಾಯಯುತವಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

K