ಹೆಬ್ರಿ: ರಸ್ತೆ ದಾಟುತ್ತಿದ್ದ ಪಾದಾಚಾರಿ ವ್ಯಕ್ತಿಯೊಬ್ಬರಿಗೆ ಬೈಕ್ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಪಾದಾಚಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಹೆಬ್ರಿಯ ಚಾರಾ ಗ್ರಾಮದ ನಿತ್ಯಾನಂದ ರಾವ್ (78) ಮೃತಪಟ್ಟವರು.
ಡಿ.26 ರಂದು ನಿತ್ಯಾನಂದರವರ ಮನೆಯಿಂದ ಬಿದಿರು ಕೊಂಡೊಯ್ಯಲು ಬಂದಿದ್ದ ಪಿಕಪ್ ವಾಹನವನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಿದ್ದು, ನಿತ್ಯಾನಂದ ಅವರು ಪಿಕಪ್ ಬಳಿ ಹೋಗಿ ವಾಹನದಲ್ಲಿದ್ದವರೊಂದಿಗೆ ಮಾತನಾಡಿ ವಾಪಾಸು ಬರಲು ರಸ್ತೆ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಿತ್ಯಾನಂದ ರಸ್ತೆ ದಾಟುತ್ತಿದ್ದಾಗ ಹೆಬ್ರಿಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿಯಾಗಿ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.