ಕಾರ್ಕಳ: ಈ ಸಲದ IPL ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರಿನ RCB ಫೈನಲಿಗೇರಿದ್ದು ಇಂದು ಗುಜರಾತಿನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ RCB ತಂಡ ಪಂಜಾಬ್ ಕಿಂಗ್ಸ್ ಇಲೆವೆನ್ ವಿರುದ್ಧ ಗೆದ್ದರೆ ಗ್ರಾಹಕರಿಗೆ ಒಂದು ಕೆಜಿ ಕೋಳಿ ಮಾಂಸದ ಜತೆಗೆ 1 ಕೆಜಿ ಕೋಳಿ ಮಾಂಸ ಉಚಿತವಾಗಿ ಸಿಗಲಿದೆ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಕಳ ತಾಲೂಕಿನ ದೊಂಡೇರಂಗಡಿ ಎಂಬಲ್ಲಿನ ಗುರುದೇವ ಕಾಂಪ್ಲೆಕ್ಸ್ ನಲ್ಲಿರುವ ಬ್ರಹ್ಮಶ್ರೀ ಚಿಕನ್ ಸೆಂಟರ್ ನಲ್ಲಿ ಉಚಿತ ಕೋಳಿ ಮಾಂಸದ ಭರ್ಜರಿ ಆಫರ್ ನೀಡಲಾಗಿದೆ. ಜನ ಉಚಿತ ಅಂದರೆ ಬಿಡ್ತಾರಾ.. ಈ ಸುದ್ದಿ ವಾಟ್ಸಾಪ್ ನಲ್ಲಿ ಹರಿದಾಡಿದ ಬೆನ್ನಲ್ಲೇ ಜನ ನಾ ಮುಂದು ತಾ ಮುಂದು ಎಂಬAತೆ ಉಚಿತ ಕೋಳಿ ಮಾಂಸಕ್ಕೆ ಚಿಕನ್ ಸೆಂಟರಿಗೆ ಓಡೋಡಿ ಬಂದರೆ ಇನ್ನು ಹಲವರು ಫೋನ್ ಮೂಲಕ ಕೋಳಿ ಮಾಂಸ ಬುಕ್ಕಿಂಗ್ ಮಾಡಲು ಮುಗಿಬಿದ್ದು ಚಿಕನ್ ಸೆಂಟರ್ ಮಾಲಕರಿಗೆ ಕರೆ ಮಾಡಿದ್ದಾರೆ.
ಆದರೆ ಅಸಲಿ ವಿಚಾರ ಏನೆಂದರೆ ವೈರಲ್ ಆಗಿರುವ ಉಚಿತ ಕೋಳಿ ಮಾಂಸ ಆಫರ್ ನಕಲಿ ಪೋಸ್ಟರ್ ಎನ್ನುವುದು ಗೊತ್ತಾಗಿದೆ. ಚಿಕನ್ ಸೆಂಟರ್ ಮಾಲಕ ಪ್ರದೀಪ್ ಶೆಟ್ಟಿಯವರ ಸ್ನೇಹಿತರು ಹಾಗೂ RCB ಅಭಿಮಾನಿಗಳು ತಮಾಷೆಗಾಗಿ ಈ ಪೋಸ್ಟರ್ ರಚಿಸಿ ವೈರಲ್ ಮಾಡಿರುವ ವಿಚಾರ ಬಯಲಾಗಿದೆ. ತಮಾಷೆಗಾಗಿ ಶೇರ್ ಮಾಡಿರುವ ಈ ಪೋಸ್ಟರ್ ನಿಂದ ನಿರಂತರ ಫೋನ್ ಕರೆಗಳಿಂದ ಚಿಕನ್ ಸೆಂಟರ್ ಮಾಲಕ ಪ್ರದೀಪ್ ಶೆಟ್ಟಿ ಮಾತ್ರ ಕಂಗಾಲಾಗಿದ್ದಾರೆ. ಅಲ್ಲದೇ ಇದು RCB ತಂಡದ ಹುಚ್ಚು ಅಭಿಮಾನಿಗಳು ವೈರಲ್ ಮಾಡಿದ್ದು, ನಮ್ಮಲ್ಲಿ ಉಚಿತ ಕೋಳಿ ಮಾಂಸ ಆಫರ್ ಇಲ್ಲವೆಂದು ಪ್ರದೀಪ್ ಸ್ಪಷ್ಟಪಡಿಸಿದ್ದಾರೆ.