ಬೆಂಗಳೂರು: ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ಪಾಪಿಗಳು ತಡರಾತ್ರಿ ಮಲಗಿದ್ದ ರಸ್ತೆಯಲ್ಲಿ ಮಲಗಿದ್ದ 3 ಹಸುಗಳ ಕೆಚ್ಚಲನ್ನು ಕೊಯ್ದು ಕಿರಾತಕರು ಪರಾರಿಯಾಗಿದ್ದು, ಇಂದು (ಜನವರಿ 12) ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಮರಾಜಪೇಟೆಯ ಕರ್ಣ ಎಂಬುವವರಿಗೆ ಸೇರಿದ ಹಸುಗಳ ಮೇಲೆ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಒಟ್ಟು 8 ಹಸುಗಳನ್ನು ಸಾಕಿರುವ ಕರ್ಣ ಪ್ರತಿ ದಿನ ಆರೈಕೆ ಮಾಡುತ್ತಾರೆ. ಈ ಪೈಕಿ ಮೂರ ರಿಂದ ನಾಲ್ಕು ಹಸುಗಳು ಮನೆಯಿಂದ ಕೆಲವೇ ದೂರದಲ್ಲಿರುವ ರಸ್ತೆಯಲ್ಲಿ ಮಲಗುತ್ತದೆ. ಹೀಗೆ ನಿನ್ನೆ ಮಲಗಿದ್ದ ಹಸುಗಳ ಕೆಚ್ಚಲನ್ನು ತಡರಾತ್ರಿ ಕಿಡಿಗೇಡಿಗಳು ಕೊಯ್ದಿದ್ದಾರೆ. ಮೂಕ ಪ್ರಾಣಿಗಳ ನರಳಾಟ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದೇ ವೇಳೆ ಘಟನಾ ಸ್ಥಳಕ್ಕೆ ಸಂಸದ ಪಿಸಿ ಮೋಹನ್ ಭೇಟಿ ನೀಡಿದ್ದಾರೆ.
ಮೂಕ ಪ್ರಾಣಿಗಳ ಕೆಚ್ಚಲು ಕೊಯ್ದ ಘಟನೆ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ಸಂಸದ ಪಿಸಿ ಮೋಹನ್ ಭೇಟಿ ನೀಡಿದ್ದಾರೆ. ಇನ್ನು ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಅಲ್ಲಿಯವರೆಗೂ ಸ್ಥಳದಿಂದ ಹೋಗಲ್ಲ. ವಿರೋಧ ಪಕ್ಷದ ನಾಯಕರು ಈಗ ಸ್ಥಳಕ್ಕೆ ಬರುತ್ತಾರೆ. ಇಲ್ಲಿ ಹಸುವಿನ ಆಸ್ಪತ್ರೆಯಿತ್ತು. ಅದನ್ನು ಮುಚ್ಚಲು ಮುಂದಾಗಿದ್ದರು. ಆದ್ರೆ, ಇದನ್ನು ಹಸುವಿನ ಮಾಲೀಕ ಕರ್ಣ ವಿರೋಧಿಸಿದ್ದ. ಅದಕ್ಕೆ ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಪಿಸಿ ಮೋಹನ್ ಆರೋಪಿಸಿದ್ದಾರೆ.