ಕಾರ್ಕಳ: ಹೋಂ ನರ್ಸ್ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬಳು ತಾನು ನೋಡಿಕೊಳ್ಲೂತ್ತಿದ್ದ ಮಹಿಳೆಯ 6 ಪವನ್ ತೂಕದ ರು.3,50,000 ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ ನಾಪತ್ತೆಯಾಗಿದ್ದಾಳೆ.
ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಈ ಘಟನೆ ನಡೆದಿದ್ದು, ನಾರಾಯಣ ತಂತ್ರಿ ಎಂಬವರು ಅನಾರೋಗ್ಯ ಪೀಡಿತರಾಗಿದ್ದ ತಮ್ಮ ಪತ್ನಿಯನ್ನು ನೋಡಿಕೊಳ್ಳಲು 2024 ರ ಡಿಸೆಂಬರ್ ನಲ್ಲಿ ಶಾಲೋಮ್ ಹೋಂ ನರ್ಸ್ನ ಮುಖ್ಯಸ್ಥರಾದ ಕ್ಲಾರಾ ಜೊತೆ ಮಾತುಕತೆ ನಡೆಸಿದ್ದು, ಅವರು ಮನೆಗೆ ಬಂದು ನಾರಾಯಣ ರವರ ಪತ್ನಿಯನ್ನು ನೋಡಿ 12.12.2024 ರಂದು ಮಂಜುಳಾ ಎಂಬವರನ್ನು ನೇಮಿಸಿ ಕಳುಹಿಸಿಕೊಟ್ಟಿದ್ದರು.
ಮಂಜುಳಾ ಮೂರು ದಿನ ಕೆಲಸ ಮಾಡಿದ ನಂತರ ಕ್ಲಾರ ಆಕೆಯನ್ನು ಹಿಂದಕ್ಕೆ ಕರೆಸಿಕೊಂಡು ಗೌರಿ ಎಂಬಾಕೆಯನ್ನು ನೇಮಕಾತಿ ಮಾಡಿ ಕಳುಹಿಸಿಕೊಟ್ಟಿದ್ದು ಆಕೆ ಹೋಂ ನರ್ಸ್ ಕೆಲಸ ನಿರ್ವಹಿಸುತ್ತಿದ್ದಳು. ಗೌರಿಯು ಜ.03 ರಂದು ತನ್ನ ತಾಯಿಗೆ ಅಸೌಖ್ಯ ಇರುವುದರಿಂದ ಮನೆಗೆ ಹೋಗಿ ಸಂಜೆ 6 ಗಂಟೆಗೆ ಬರುತ್ತೇನೆಂದು ತಿಳಿಸಿದ್ದು, ನಾರಾಯಣ ಅವರು ಗೌರಿಯನ್ನು ಬಸ್ ಸ್ಟಾಂಡ್‌ಗೆ ಬಿಟ್ಟು ಬಸ್ಸಿಗೆ 500/ ರೂ ಕೊಟ್ಟು ಕಳುಹಿಸಿದದರು.
ಆದರೆ ನಾರಾಯಣ ಅವರು ಸಂಜೆ ಮನೆಯಲ್ಲಿ ಬಂದು ನೋಡಿದಾಗ ಪತ್ನಿಯ ಕುತ್ತಿಗೆಯಲ್ಲಿದ್ದ 3,50,000 ರೂ. ಬೆಲೆ ಬಾಳುವ ಸುಮಾರು 6 ಪವನ್ ಚಿನ್ನದ ಮಾಂಗಲ್ಯ ಸರ ಕಾಣೆಯಾಗಿದ್ದು, ಗೌರಿಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಅದನ್ನು ಗೌರಿಯೇ ಕಳವು ಮಾಡಿರುತ್ತಾಳೆ ಎಂದು ಕ್ಲಾರಾ ರವರಲ್ಲಿ ವಿಚಾರ ತಿಳಿಸಿದಾಗ ಈ ಕುರಿತು ದೂರು ನೀಡಿದರೆ ಸಂಸ್ಥೆಯ ಗೌರವಕ್ಕೆ ದಕ್ಕೆಯಾಗುವುದರಿಂದ ಕಾಣೆಯಾದ ಗೌರಿಯನ್ನು ಹುಡುಕಿ ಆಕೆಯಿಂದ ಮಾಂಗಲ್ಯ ಸರವನ್ನು ವಾಪಾಸು ಕೊಡಿಸುವುದಾಗಿ ತಿಳಿಸಿದ್ದರು. ಆದರೆ ನಂತರ ಕ್ಲಾರಾ ದೂರು ನೀಡಿದಲ್ಲಿ ಆರೋಪಿ ಗೌರಿಯ ತಾಯಿಯ ಮುಖಾಂತರ ನಾರಾಯಣ ತಂತ್ರಿ ಅವರ ವಿರುದ್ಧವೇ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.