ಉಡುಪಿ: ರಾಜ್ಯ ಬಜೆಟಿನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನವನ್ನು ನೀಡದಿರುವುದು ಮತ್ತು ೯ ಹೊಸ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಬಜೆಟಿನಲ್ಲಿ ಯಾವುದೇ ಅನುದಾನವನ್ನು ಘೋಷಿಸದೆ ಮುಚ್ಚಲು ಹೊರಟಿರುವುದು ಅವೈಜ್ಞಾನಿಕ ಮತ್ತು ದುರಂತ ಎಂದು ಉಡುಪಿ ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಸುರೇಂದ್ರ ಶೆಟ್ಟಿ ಹೇಳಿದ್ದಾರೆ.
ಸರ್ಕಾರ ಮುಚ್ಚಲು ಉದ್ದೇಶಿಸಿರುವ ಬಹುಪಾಲು ವಿಶ್ವವಿದ್ಯಾಲಯಗಳು ಸಾಮಾಜಿಕವಾಗಿ ಹಾಗೂ ಶೆಕ್ಷಣಿಕವಾಗಿ ಹಿಂದುಳಿದ ಮತ್ತು ಶೋಷಿತ ವರ್ಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸ್ಥಾಪಿತವಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ಅವರೆಲ್ಲರೂ ಶಿಕ್ಷಣದಿಂದ ವಂಚಿರಾಗಲಿದ್ದಾರೆ. ಅಲ್ಲದೆ ಸಂಶೋಧನಾ ಅಧ್ಯಯನಕ್ಕೆ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಅವಕಾಶದಿಂದಲೂ ವಂಚಿತರಾಗಲಿದ್ದಾರೆ. ಅನೇಕ ವರ್ಷಗಳಿಂದ ಶಿಕ್ಷಣ ತಜ್ಞರು, ಶಿಕ್ಷಣ ಪ್ರಿಯರ ಆಗ್ರಹ ಹಾಗು ಅನೇಕ ಅಧ್ಯಯನಗಳ ಫಲಶೃತಿಯಿಂದ ಸ್ಥಾಪಿಸಲಾಗಿದ್ದ ವಿಶ್ವವಿದ್ಯಾಲಯಗಳು ಇವು. ರಾಜ್ಯ ಸರ್ಕಾರ ಏಕಾಏಕಿ ತೆಗೆದುಕೊಂಡಿರುವ ಈ ನಿರ್ಧಾರ ಶೈಕ್ಷಣಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ.
ಜಿಲ್ಲಾವಾರು ಯೂನಿವರ್ಸಿಟಿ ಸ್ಥಾಪನೆಯಿಂದ ಆರ್ಥಿಕ ಒತ್ತಡವಿಲ್ಲದೆ ಆಯಾ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮ್ಮ ಸಂಶೋಧನೆ ಹಾಗು ವಿದ್ಯಾಭ್ಯಾಸವನ್ನು ಮುಂದುವರಿಸಲು ಒಂದು ದೊಡ್ಡ ಅವಕಾಶವನ್ನು ಮಾಡಿಕೊಡಲಾಗಿತ್ತು.ಇಂತಹ ಯುನಿವೆರ್ಸಿಟಿಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಖೇದಕರ. ಇದರ ಹಿಂದೆ ಸ್ಥಾಪಿತ ಹಿತಾಶಕ್ತಿಗಳ ಕೈವಾಡವಿರಬಹುದೇ ಎನ್ನುವ ಶಂಖೆ ಮೂಡುತ್ತದೆ.ಶಿಕ್ಷಣದ ಮೇಲಿನ ಖರ್ಚು ಎಂಬುದು ಮುಂದಿನ ಮಾನವ ಸಂಪನ್ಮೂಲವನ್ನು ನಿರ್ಮಿಸುವ ಬಂಡವಾಳವಾಗಿರುತ್ತದೆ. ಶಿಕ್ಷಣದ ಮೇಲೆ ಹೂಡಿಕೆಮಾಡುವುದರಿಂದ ರಾಜ್ಯವು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿಯೂ ಬಲಗೊಳ್ಳಲಿದೆ. ಸರಕಾರವು ಅನುದಾನ ಘೋಷಿಸದೆ ತೋರುತ್ತಿರುವ ಈ ಧೋರಣೆಯಿಂದ ಹಿಂದಡಿ ಇಡದಿದ್ದರೆ ನಮ್ಮ ರಾಜ್ಯಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದೆ. ಅಲ್ಲದೆ ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣವನ್ನು ಕಸಿದಂತಾಗುತ್ತದೆ.
ಇದೆಲ್ಲವನ್ನು ಗಮನಿಸಿ ಸರ್ಕಾರ ಈ ಚಿಂತನೆಯನ್ನ ಈ ಕೂಡಲೇ ಕೈಬಿಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಡಾ. ಸುರೇಂದ್ರ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಾದ ಡಾ. ರಾಧಾಕೃಷ್ಣ ಹಾಗೂ ಡಾ.ಭೈರವಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

K