ಕಾರ್ಕಳ: ಸರ್ಕಾರಿ ಶಾಲೆಗಳನ್ನು ಬೆಳೆಸಿ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು,ಇದರ ಅಂಗವಾಗಿ ಅತ್ಯುತ್ತಮ ಶಾಲೆಯನ್ನು ಆರಿಸಿ ಗೌರವಿಸುವ ನಿಟ್ಟಿನಲ್ಲಿ ಸಮಾಜ ಸೇವಕ ಬಜಗೋಳಿ ರವೀಂದ್ರ ಶೆಟ್ಟಿ ಮುಂದಾಗಿದ್ದು ಉತ್ತಮ ಶೈಕ್ಷಣಿಕ ಸಾಧನೆಗೈದ ಶಾಲೆಗೆ ಕರುನಾಡಸಿರಿ ಉತ್ತಮ ಶಾಲೆ ಪ್ರಶಸ್ತಿ ನೀಡಲಿದ್ದಾರೆ.
ಈಗಾಗಲೇ ನೂರು ಸಂವತ್ಸರ ತುಂಬಿ ಶತಮಾನೋತ್ಸವ ಆಚರಿಸಿಕೊಂಡ ಶಾಲೆಯೆಂಬ ಶ್ರೇಷ್ಠ ಹೆಗ್ಗಳಿಕೆ ಪಡೆದ ಕಲ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರುನಾಡಸಿರಿ ಉತ್ತಮ ಶಾಲೆ ಪ್ರಶಸ್ತಿ ಸಂದಿದೆ.
ಈ ಶಾಲೆಯಲ್ಲಿ ಅಂದಿನಿಂದ ಇಂದಿನವರೆಗೆ ಅದೆಷ್ಟೋ ವಿದ್ಯಾರ್ಥಿಗಳು ಬಡವರಿರಲಿ ಶ್ರೀಮಂತರಿರಲಿ ಕನ್ನಡ ಮಾತೃಭಾಷೆಯಲ್ಲಿ ಒಂದೇ ತಾಯ ಮಕ್ಕಳೆಂದು ವಿದ್ಯೆಯನ್ನು ಕಲಿತು ನಾಡಿಗೆ ದೇಶಕ್ಕೆ ಶ್ರೇಷ್ಠ ವ್ಯಕ್ತಿಗಳಾಗಿ ಒಂದು ಪುಟ್ಟ ಹಳ್ಳಿಯೆನಿಸಿದ ಕಲ್ಯಾ ಊರಿನಲ್ಲಿ ಅಂದು ಶಾಲೆಯ ಅವಶ್ಯಕತೆ ಇದ್ದಾಗ ಊರ ಹಿರಿಯರು ಹಾಗೂ ಮಹನೀಯರು ತೆರೆದ ಶಾಲೆಯು ಅಸಂಖ್ಯಾತ ವಿದ್ಯಾರ್ಥಿಗಳಿಗೆ ಬೆಳಕಾಗಿದೆ
ಶತ ವರ್ಷದ ಸಂಭ್ರಮ ಶಾಲೆಯ ಮೂಲಭೂತ ಸೌಕರ್ಯ ಹಾಗೂ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಕನ್ನಡ ಮಾತೃಭಾಷಾ ಅಭಿಮಾನ ಕೈಗೊಂಡ ಕನ್ನಡ ನಾಡು ನುಡಿಯ ಕೈಕಂರ್ಯವನ್ನು ಪರಿಣಿಗಣಿಸಿ ಶಿಕ್ಷಣ ಪ್ರೇಮಿ ಡಾ ರವೀಂದ್ರ ಶೆಟ್ಟಿ ಬಜಗೋಳಿ ಇವರು ಪ್ರಾಯೋಜಿಸಿದ ಕರುನಾಡ ಸಿರಿ ಉತ್ತಮ ಶಾಲೆ ಪ್ರಶಸ್ತಿಯನ್ನು ಶಿರ್ಲಾಲಿನಲ್ಲಿ ನ. 6 ರಂದು ನಡೆಯುವ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಸಮಾಜ ಸೇವಕ, ಕೊಡುಗೈ ದಾನಿ,ಶಿಕ್ಷಣ ಪ್ರೇಮಿ ರವೀಂದ್ರ ಶೆಟ್ಟಿ ಬಜಗೋಳಿ ಅವರ ಈ ಕಾರ್ಯಕ್ಕೆ ಸಾಮಾಜಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ