

ಕಾರ್ಕಳ,ಸೆ.18: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಸಹಯೋಗದಲ್ಲಿ ಹಾಸನದ ಪ್ರತಿಷ್ಠಿತ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಕಳದ ಪುಸ್ತಕ ಮನೆ ವತಿಯಿಂದ ಕನ್ನಡದ ಪ್ರಖ್ಯಾತ ಹಾಸ್ಯ ಕವಿ ಹಾಗೂ ನಾಟಕಕಾರ ಎಚ್ ಡುಂಡಿರಾಜ್ ಅವರ 100ನೇ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ 70ನೇ ವರ್ಷದ ಅಭಿನಂದನೆ ಮತ್ತು ಖ್ಯಾತ ಸಾಹಿತಿಗಳಾದ ಬಿ ಆರ್ ಲಕ್ಷ್ಮಣರಾವ್ ಅವರ ಪುಸ್ತಕ ಬಿಡುಗಡೆ ಹಾಗೂ 80ನೇ ವರ್ಷದ ಅಭಿನಂದನಾ ಕಾರ್ಯಕ್ರಮ ಸೆ.16 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಎಚ್ ಡುಂಡಿರಾಜ್ ಅವರ;ಕಾವ್ಯ ಡುಂಡಿಮ; ಮತ್ತು ಬಿ ಆರ್ ಲಕ್ಷ್ಮಣ ರಾವ್ ಅವರ;ಸಾವೇ ಬೀಗಬೇಡ; ಹಾಗೂ 'ಓಶೋ ರಜನೀಶ್ ನಿಜರೂಪ' ಎಂಬ ಕೃತಿಗಳು ಲೋಕಾರ್ಪಣೆಗೊಂಡವು.
ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವತ್ ಎಸ್ ಎಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕ್ರಿಯೇಟಿವ್ ಪುಸ್ತಕ ಮನೆ ನಮ್ಮ ನಾಡಿನ ಖ್ಯಾತ ಬರಹಗಾರರ ಕೃತಿಗಳನ್ನು ಪ್ರಕಾಶನ ಮಾಡಲಾಗುತ್ತಿದೆ ಎಂದರು.
ಸಾಹಿತಿಗಳು, ವಿಮರ್ಶಕರು, ಲೇಖಕರು ಹಾಗೂ ಅಧ್ಯಾಪಕರಾದ ಡಾ. ಎಚ್ ಎಸ್ ಸತ್ಯನಾರಾಯಣ ಅವರು ಕನ್ನಡದ ಪ್ರೇಮಕವಿ ಎಂದು ಹೆಸರುವಾಸಿಯಾದ ಕೆ ಎಸ್ ನರಸಿಂಹಸ್ವಾಮಿಯವರAತೆ ಮುಂದುವರೆದ ಇಂದಿನ ಪ್ರೇಮ ಕವಿ ಬಿ ಆರ್ ಲಕ್ಷ್ಮಣ ರಾಯರು ಎಂದು ಅವರ ಬಿಡುಗಡೆಯಾದ ಪುಸ್ತಕಗಳನ್ನು ಪರಿಚಯಿಸಿಕೊಟ್ಟರು. ಹಾಗೂ ಡುಂಡಿರಾಜರ ಹಲವಾರು ಹನಿಗವನಗಳನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿ ಕೃತಿ ಹಾಗೂ ಕೃತಿಕಾರರ ಕುರಿತು ಮಾತನಾಡಿದರು.
ಖ್ಯಾತ ಸಾಹಿತಿಗಳಾದ ಬಿ ಆರ್ ಲಕ್ಷ್ಮಣ ರಾಯರು ನಮ್ಮ ನಾಡಿನಲ್ಲಿ ಇಂಗ್ಲಿಷ್ ಒಂದು ಭಾಷೆಯಾಗಿ ಬಳಸದೆ ಪ್ರತಿಷ್ಠೆಯಾಗಿ ಬೆಳೆಯುತ್ತಿದೆ. ಕನ್ನಡಕ್ಕಾಗಿ ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸುವುದಕ್ಕಾಗಿ ಬೇರೆ ಬೇರೆ ಭಾಷೆಗಳನ್ನು ಕಲಿತೆ ಎಂದು ತನ್ನ ಪುಸ್ತಕಗಳನ್ನು ಪ್ರಕಟಿಸಿದ ಪುಸ್ತಕ ಮನೆಗೆ ಅಭಿನಂದಿಸಿದರು. ಕನ್ನಡದ ಪ್ರಖ್ಯಾತ ಹಾಸ್ಯಕವಿ ಹಾಗೂ ನಾಟಕಕಾರ ಎಚ್ ಡುಂಡಿರಾಜ್ ಅವರು ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಿಸಿದ ನೂರನೇ ಪುಸ್ತಕ ನನ್ನ ಕೃತಿ;ಕಾವ್ಯ ಡುಂಡಿಮ ವೆಂದು ಸಂತಸ ವ್ಯಕ್ತಪಡಿಸಿ ಪುಸ್ತಕ ಮನೆಗೆ ಅಭಿನಂದಿಸಿ ತಮ್ಮದೇ ಹಲವಾರು ಹಾಸ್ಯ ಚುಟುಕುಗಳನ್ನು ವಾಚಿಸಿದರು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ಪ್ರಾಧ್ಯಾಪಕರು, ಸಾಹಿತಿ ಡಾ. ಎಚ್ ಎಲ್ ಮಲ್ಲೇಶ್ ಗೌಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರಿನ ಹೆಸರಾಂತ ಗಾಯಕರಾದ ಪಂಚಮ್ ಹಳಿ ಬಂಡಿ ಹಾಗೂ ಚಿನ್ಮಯಿ ಚಂದ್ರಶೇಖರ್ ಅವರು ಸಾಹಿತಿಗಳ ರಚನೆಯಲ್ಲಿ ಮೂಡಿ ಬಂದ ಕವನಗಳನ್ನು ಗಾಯನ ಮಾಡಿದರು. ಅವಿನಾಶ್ ಕಾಮತ್ ಅವರು ಕಾವ್ಯ ದಿಗ್ಗಜರುಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರವೀಣ್ ಎ ಹಾಗೂ ಉಪ ಪ್ರಾಂಶುಪಾಲರಾದ ಲೋಕೇಶ್ ಪೂಜಾರಿ ಅವರು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕರಾದ ರಮೇಶ್ ಎಂ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.





.
.
.
.
.
.
.
.
.
.
.
.
.
.
.
.
.
.
.
.
