ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಜೊತೆಗೆ ಕಡಲಬ್ಬರ ಕೂಡ ಜೋರಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತ ಮೀನುಗಾರಿಕೆ ನಿರ್ಭಂದಿಸಿದೆ. ಆದರೆ, ಮಂಗಳೂರು ಕಡಲತೀರದ ತೋಟಬೆಂಗ್ರೆ ಅಳಿವೆ ಬಾಗಿಲು ಬಳಿ ನಿಯಮ ಮೀರಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ್ ಮತ್ತು ಕಮಲಾಕ್ಷ ನೀರುಪಾಲಾದ ದುರ್ದೈವಿಗಳು.
ಈ ಇಬ್ಬರು ಮೀನುಗಾರರು ನಿಯಮ ಮೀರಿ ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಅವಘಡ ಸಂಭವಿಸಿದೆ. ನಾಡದೋಣಿಯ ಅವಶೇಷಗಳು ಕಡಲತೀರಕ್ಕೆ ತೇಲಿ ಬಂದಿವೆ. ಸಮುದ್ರದಲ್ಲಿ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ನಡೆದಿದೆ.