ಕಾರ್ಕಳ: ಮಳೆಗಾಲದ ಆರಂಭವಾಗಿ 15 ದಿನ ಕಳೆಯುವ ಮೊದಲೇ ಕಾರ್ಕಳ ಪುರಸಭೆ ಹಾಗೂ ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಪ್ರಮುಖ ರಸ್ತೆಗಳು ಅಲ್ಲಲ್ಲಿ ಗುಂಡಿ ಬಿದ್ದಿದೆ. ಕಳೆದ ಬಾರಿ ತೇಪೆ ಹಾಕಿದ ಕಡೆಗಳಲ್ಲಿ ಮತ್ತೆ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಕಳ ಪುರಸಭೆಯ ಹಲವೆಡೆ ಪೈಪ್ ಲೈನ್ ಕಾಮಗಾರಿಗಳಿಂದ ರಸ್ತೆ ಚಿಂದಿಚಿತ್ರಾನ್ನವಾಗಿದ್ದು ಓಡಾಡುವವರಿಗೆ ನಿತ್ಯ ಕೆಸರಿನ ಅಭಿಷೇಕ ಮಾಮೂಲಿಯಾಗಿದೆ.
ಇದಲ್ಲದೇ ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿ, ಉಡುಪಿ ಕಾರ್ಕಳ ಹೆದ್ದಾರಿ ಸೇರಿದಂತೆ ಹಲವೆಡೆ ರಸ್ತೆಗಳು ಹೊಂಡಮಯವಾಗಿದ್ದು, ಗುಂಡಿಯಲ್ಲಿ ಮಳೆ ನೀರು ನಿಂತು ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆಯುತ್ತಿವೆ. ಗುಂಡಿಬಿದ್ದ ಕಡೆಗಳಲ್ಲಿ ತಾತ್ಕಾಲಿಕವಾಗಿ ಜಲ್ಲಿಮಿಶ್ರಿತ ಮರಳನ್ನು ತುಂಬಿಸಿ ವಾಹನ ಅಪಘಾತಗಳನ್ನು ತಪ್ಪಿಸಬೇಕಿದೆ. ಆದರೆ ಇದೇ ರಸ್ತೆಯಲ್ಲಿ ಓಡಾಡುವ ಅಧಿಕಾರಿಗಳು ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಬೇಕೆಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಂದು ವಾರದೊಳಗೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸಲಾಗುತ್ತದೆ: ಲೋಕೋಪಯೋಗಿ ಇಂಜಿನಿಯರ್ ಸೋಮಶೇಖರ್
ಈಗಾಗಲೇ ಹಲವೆಡೆ ರಸ್ತೆಗಳು ಭಾರೀ ಮಳೆಯ ಕಾರಣದಿಂದಾಗಿ ಗುಂಡಿ ಬಿದ್ದಿದೆ. ಒಂದು ವಾರದೊಳಗೆ ಎಲ್ಲಾ ರಸ್ತೆಗಳ ಗುಂಡಿಯನ್ನು ಮುಚ್ಚುವ ಕೆಲಸ ಆರಂಭಿಸಲಾಗುತ್ತದೆ ಎಂದು ಲೋಕೋಪಯೋಗಿ ಇಂಜಿನಿಯರ್ ಸೋಮಶೇಖರ್ ಕರಾವಳಿ ನ್ಯೂಸ್ ಗೆ ತಿಳಿಸಿದ್ದಾರೆ