
ಬೆಂಗಳೂರು, ಜೂ.19: ಈ ಬಾರಿ ದೇಶದಲ್ಲಿ ಸರಿಯಾದ ಸಮಯಕ್ಕೆ ಮುಂಗಾರು ಆಗಮನವಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಅತೀ ಕಡಿಮೆ ಮಳೆಯಾಗಿದ್ದರೆ, ಇನ್ನು ಕೆಲವೆಡೆ ಮಳೆಯೇ ಬಾರದೆ ಕೆರೆ, ನದಿ, ಬಾವಿಗಳು ಒಣಗಿ ಹೋಗಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ಮಳೆ ಮತ್ತು ಬರಗಾಲದ ಕುರಿತಾದ ಸುದ್ದಿ ಹರಿದಾಡುತ್ತಿದೆ. ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗುವುದಿಲ್ಲ, ಭೀಕರ ಬರಗಾಲ ಆವರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ಆದರೆ, ಈ ಆತಂಕಕ್ಕೆ ಹವಾಮಾನ ತಜ್ಞರು ಹಾಗೂ ವಿಜ್ಞಾನಿಗಳು ತೆರೆ ಎಳೆದಿದ್ದು, ರಾಜ್ಯದಲ್ಲಿ ಯಾವುದೇ ಭೀಕರ ಬರಗಾಲ ಬರುವುದಿಲ್ಲ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕೃಷಿ ಹವಾಮಾನ ತಜ್ಞ ಡಾ. ಎಂ.ಬಿ. ರಾಜೇಗೌಡ, ‘ರಾಜ್ಯದಲ್ಲಿ
ಎಲ್ ನಿನೋ ನೆಗೆಟಿವ್ ಇಂಪ್ಯಾಕ್ಟ್ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುವ ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ. ಇದರಿಂದ -4 ರಿಂದ -8% ಮಳೆ ಕೊರತೆಯಾಗಬಹುದಾದರೂ, ಮಳೆ ಹಂಚಿಕೆ ಸಮರ್ಪಕವಾಗಿದ್ದರೆ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದು. ನೆಗೆಟಿವ್ ನಾರ್ಮಲ್‌ನಿಂದಾಗಿ ಡ್ಯಾಮ್‌ಗಳು ತುಂಬಬಹುದು, ಆದಾಗ್ಯೂ, ಕೃಷಿಗೆ ಇದರಿಂದ ಯಾವುದೇ ಧಕ್ಕೆ ಇಲ್ಲ. ಇದರ ಮಧ್ಯೆ ವೆಸ್ಟರ್ನ್ ಡಿಸ್ಟ್ರಬೆನ್ಸ್ ಆರಂಭವಾಗಿರುವುದರಿಂದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಗುತ್ತಿರುವುದು ಶುಭ ಸೂಚಕವಾಗಿದೆ. ಅಲ್ಲದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಕಾರ್ಯ ಹೆಚ್ಚಾಗಿದೆ. ಕಳೆದ ಸಲ 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದ್ದ ಬಿತ್ತನೆ ಕ್ಷೇತ್ರ, ಈ ಬಾರಿ 17 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿದೆ. ಹೀಗಾಗಿ ರೈತಾಪಿ ವರ್ಗ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ, ರಾಜ್ಯದಲ್ಲಿ ಭೀಕರ ಬರಗಾಲ ಬರಲಿದೆ ಎಂಬ ವದಂತಿಗೆ ತಜ್ಞರು ಮತ್ತು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ಒಂದಷ್ಟು ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇದೆಯೇ ಹೊರತು, ಅಷ್ಟೊಂದು ದೊಡ್ಡ ಮಟ್ಟದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
