ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ,ಕಂದಾಯ ಭೂಮಿಗಳಲ್ಲಿ ವಾಸವಿದ್ದು, ಕರ್ನಾಟಕ ಭೂ ಕಂದಾಯ ಇಲಾಖೆಯ ಕಾಯ್ದೆ ಅನ್ವಯ ಸಕ್ರಮಗೊಂಡ ನಿವೇಶನ, ಮನೆಗಳಿಗೆ ನೀಡಿದ ಇ-ಸ್ವತ್ತುಗಳಲ್ಲಿ ಮಾಲೀಕರ ಹೆಸರು ಸೇರ್ಪಡೆ, ಬದಲಾವಣೆಗೆ ₹1,000 ಶುಲ್ಕ ವಿಧಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಸಕ್ರಮಗೊಂಡ ನಿವೇಶನ, ಮನೆಗಳಿಗೆ ಅಧಿಕೃತ ಖಾತೆ ನೀಡಲು ಅನುಕೂಲವಾಗುವಂತೆ ಕಂದಾಯ ಇಲಾಖೆ ಇ-ಸ್ವತ್ತು ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಎಲ್ಲ ಪಂಚಾಯಿತಿಗಳ ಪಿಡಿಒಗಳು ಈ ತಂತ್ರಾಂಶದ ಮೂಲಕ ಇ-ಸ್ವತ್ತು (ನಮೂನೆ-9 ಮತ್ತು ನಮೂನೆ 11-ಎ) ನೀಡಬೇಕು. ಆಸ್ತಿ ವಿವರಗಳ ಕಾಲಂನಲ್ಲಿ ಹೆಸರು, ಸೇರ್ಪಡೆ ಹಾಗೂ ಬದಲಾವಣೆಗೆ ವಿಧಿಸುವ ಶುಲ್ಕವನ್ನು ಇ-ಸ್ವತ್ತು ವಿತರಿಸಿದ ಒಂದು ವರ್ಷದ ಒಳಗೆ ಗರಿಷ್ಠ ನಾಲ್ಕು ಕಂತುಗಳಲ್ಲಿ ಸಂಗ್ರಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿದೆ.