ಕಾರವಾರ : ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾ ಬಳಿ ಗ್ರಾಮಸ್ಥರ ಒಡನಾಡಿಯಾಗಿದ್ದ ಕಾಡುಹಂದಿಯನ್ನು ನಾಡಬಾಂಬ್ ಇಟ್ಟು ಹತ್ಯೆ ಮಾಡಿದ್ದು, ಆರೋಪಿ ಸೀಫ್ರನ್ ಥಾಮಸ್ ಫರ್ನಾಂಡಿಸ್ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕೆಲವು ದಿನಗಳಿಂದ ಕಾಡುಹಂದಿಗಳ ಗುಂಪು ಜನವಸತಿ ಪ್ರದೇಶಗಳಿಗೆ ಬರುತ್ತಿತ್ತು. ಇದನ್ನು ಗಮನಿಸಿದ ಚೆಂಡಿಯಾ ಗ್ರಾಮದವರು ಹಂದಿಗೆ ಹಣ್ಣು, ತರಕಾರಿ ಸೇರಿದಂತೆ ವಿವಿಧ ಆಹಾರ ನೀಡುತ್ತಿದ್ದರು. ಕಾಡುಹಂದಿ ಜನರಿಗೆ ಯಾವುದೆ ತೊಂದರೆ ಉಂಟು ಮಾಡದೆ ರಾತ್ರಿ ವೇಳೆ ನಾಡಿಗೆ ಬಂದು ಆಹಾರ ತಿಂದು ಹೋಗುತ್ತಿತ್ತು. ಕೆಲವೊಮ್ಮೆ ಈ ಹಂದಿ ಹಗಲಿನ ವೇಳೆಯೂ ಬರುತ್ತಿತ್ತು.
ಆದರೆ ಶುಕ್ರವಾರ ರಾತ್ರಿ ಸ್ಥಳೀಯರಿಗೆ ಬಾಂಬ್ ಸಿಡಿದ ಶಬ್ದ ಕೇಳಿಸಿದೆ. ಬಳಿಕ ಗ್ರಾಮದ ಸ್ಮಶಾನದ ಬಳಿ ಆಹಾರಕ್ಕಾಗಿ ಬರುತ್ತಿದ್ದ ಹಂದಿಯು ನಾಡ ಬಾಂಬ್ ತಿಂದು ಮೃತಪಟ್ಟಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಡ ಬಾಂಬ್‌ಗೆ ಕೋಳಿ ಮಾಂಸವನ್ನು ಕಟ್ಟಿ ಇಡಲಾಗಿದ್ದು ಹಂದಿಯು ಮಾಂಸ ತಿಂದೊಡನೆ ಸ್ಫೋಟಗೊಂಡು ಮೃತಪಟ್ಟಿರುವುದು ಖಚಿತವಾಗಿದೆ. ಸ್ಥಳದಲ್ಲಿ ಇನ್ನೊಂದು ಜೀವಂತ ನಾಡ ಬಾಂಬ್ ಕೂಡಾ ಪತ್ತೆಯಾಗಿದ್ದು ಶನಿವಾರ ಆರೋಪಿ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅದೇ ಪ್ರದೇಶದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆಯಾಗಿದ್ದು, ಮಂಗಳೂರಿನಿAದ ಬಾಂಬ್ ನಿಷ್ಕಿçಯ ದಳ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ.