
ಬೆಂಗಳೂರು,ಮೇ.02 : ಬಿಪಿಎಲ್ ಪಡಿತರ ಚೀಟಿ ವಿತರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಆದಾಯದ ಸುಳ್ಳು ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆಯುವವರ ಕಾರ್ಡ್ ರದ್ದು ಮಾಡಲಾಗುತ್ತಿದೆ. ಕಳೆದ 3 ವರ್ಷಗಳಿಂದ ಸರ್ಕಾರ ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನು ಆಹ್ವಾನಿಸದ ಹಿನ್ನಲೆಯಲ್ಲಿ ಇದೀಗ ರಾಜ್ಯದಲ್ಲಿ ಬರೋಬ್ಬರಿ 7.76 ಲಕ್ಷ ಅನುಮಾನಾಸ್ಪದ ನಕಲಿ ಬಿಪಿಎಲ್ ರೇಶನ್ ಕಾರ್ಡ್ ಪತ್ತೆಯಾಗಿದೆ.
ರಾಜ್ಯ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಸ್ತುತ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯವರಿಗೆ, ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ, ಬುಡಕಟ್ಟು ಜನಾಂಗದವರಿಗೆ ಆದ್ಯತಾ ಪಡಿತರ ಚೀಟಿ ನೀಡುತ್ತಿದೆ.ಆದರೆ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಿಲ್ಲ, ಈ ಹಿನ್ನಲೆಯಲ್ಲಿ ಲಕ್ಷಾಂತರ ಕುಟುಂಬಗಳು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಕೇವಲ ಅಕ್ಕಿ ಪಡೆಯಲು ಮಾತ್ರವಲ್ಲದೇ, ಸರ್ಕಾರದ ವಿವಿಧ ಯೋಜನೆಗಳಾದ ಉಚಿತ ವೈದ್ಯಕೀಯ ಚಿಕಿತ್ಸೆ (ಆಯುಷ್ಮಾನ್ ಭಾರತ್), ಗೃಹ ಲಕ್ಷ್ಮಿಯಂತಹ ಗ್ಯಾರಂಟಿ ಯೋಜನೆಗಳು ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯವಾಗಿದೆ. ಕಾರ್ಡ್ ಇಲ್ಲದ ಕಾರಣ ಬಡ ರೋಗಿಗಳು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲಾಗದೇ ಪರದಾಡುತ್ತಿದ್ದಾರೆ. ಸರ್ಕಾರ ಯೋಜನೆಗಳನ್ನು ಘೋಷಿಸುತ್ತಿದೆಯೇ ಹೊರತು, ಅವುಗಳನ್ನು ಪಡೆಯಲು ಬೇಕಾದ ಮೂಲ ದಾಖಲೆಯನ್ನೇ ನೀಡುತ್ತಿಲ್ಲವೆಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಅನರ್ಹ ಪಡಿತರ ಚೀಟಿಗಳ ರದ್ದತಿ ಮತ್ತು ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಸರ್ಕಾರವು ಹೊಸ ಅರ್ಜಿ ಸ್ವೀಕಾರವನ್ನು ಮುಂದೂಡುತ್ತಲೇ ಬಂದಿದೆ. ಸುಮಾರು ಲಕ್ಷಾಂತರ ಅರ್ಜಿಗಳು ಈಗಾಗಲೇ ವಿಲೇವಾರಿಗೆ ಬಾಕಿ ಇವೆ ಎಂದು ಹೇಳಲಾಗುತ್ತಿದ್ದು, ಹೊಸ ಅರ್ಜಿ ಆಹ್ವಾನಿಸುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಇದರಿಂದಾಗಿ ಕೆಳಮಧ್ಯಮ ವರ್ಗದವರು ಮತ್ತು ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ.
ರಾಜ್ಯ ಸರ್ಕಾರವು ಕೂಡಲೇ ಪೋರ್ಟಲ್ ತೆರೆದು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ವಿಶೇಷವಾಗಿ ಮರಣ ಹೊಂದಿದವರ ಅಥವಾ ಅನರ್ಹರ ಕಾರ್ಡ್ಗಳನ್ನು ರದ್ದುಗೊಳಿಸಿದ ಜಾಗದಲ್ಲಿ ಅರ್ಹ ಬಡವರಿಗೆ ತಕ್ಷಣವೇ ಕಾರ್ಡ್ ವಿತರಿಸುವ ಕೆಲಸವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಲಾಭ ಎಲ್ಲರಿಗೂ ತಲುಪಬೇಕಾದರೆ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಚುರುಕುಗೊಳ್ಳುವುದು ಅತ್ಯಗತ್ಯವಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
