

ಬೆಂಗಳೂರು,ಆ.14: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರು ಮೂಲದ ಸಾಹಸ ಹವ್ಯಾಸಿಗಳ ಗುಂಪೊAದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಚಿಕ್ಕಮಗಳೂರು ಭಾಗದಲ್ಲಿ ಹಮ್ಮಿಕೊಳ್ಳಲಾಗಿರುವ ಆಫ್-ರೋಡ್ ಅಡ್ವೆಂಚರ್ ಡ್ರೈವ್ ಸಾಹಸಯಾತ್ರೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯುವಕರ ಇಂತಹ ಈವೆಂಟ್ ನಿಂದಾಗಿ ಗ್ರಾಮೀಣ ರಸ್ತೆಗಳಿಗೆ ಹಾನಿಯಾದರೆ ಅಥವಾ ಜಲಮೂಲಗಳು ಕಲುಷಿತಗೊಂಡರೆ ಈವೆಂಟ್ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಳೆಯಿಂದಾಗಿ ಈಗಾಗಲೇ ಕೆಸರಾಗಿರುವ ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲಿ ಆಫ್-ರೋಡ್ ಚಾಲನಾ ಈವೆಂಟ್ ನಡೆಸಿದ್ದಲ್ಲಿ ರಸ್ತೆಗಳು ಮತ್ತಷ್ಟು ಹಾಳಾಗುತ್ತದೆ.ಮಾರ್ಪಾಡು ಮಾಡಲಾದ ಮತ್ತು ದೊಡ್ಡ ಆಫ್-ರೋಡ್ ಟೈರ್ಗಳನ್ನು ಹೊಂದಿರುವ ಇಂತಹ ವಾಹನಗಳನ್ನು ಮಳೆಯಿಂದ ತೇವಗೊಂಡಿರುವ ಗ್ರಾಮೀಣ ರಸ್ತೆಗಳಲ್ಲಿ ಅತಿ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಚಲಾಯಿಸುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತವೆ. ಅಷ್ಟೇ ಅಲ್ಲದೆ, ಇದು ತೀವ್ರ ಮಣ್ಣಿನ ಸವೆತಕ್ಕೂ ಕಾರಣವಾಗುತ್ತದೆ.ಜೊತೆಗೆ, ಇಂತಹ ಚಟುವಟಿಕೆಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವು ಸ್ಥಳೀಯ ವನ್ಯಜೀವಿಗಳಿಗೆ ತೊಂದರೆ ಉಂಟುಮಾಡಲಿದೆ. ಅರಣ್ಯ, ನದಿ, ಸರೋವರ ಹಾಗೂ ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ.
ಈ ಸಾಹಸ ಯಾತ್ರೆಯಿಂದ ಯಾವುದೇ ಕಾರಣಕ್ಕೂ ಪರಿಸರಕ್ಕೆ ಮಾರಕವಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಪ್ರಮುಖವಾಗಿ ಕುಡಿಯುವ ನೀರಿನ ಮೂಲಗಳಾಗಿರುವ ನದಿಗಳು, ತೊರೆಗಳು ಮತ್ತು ನಾಲೆಗಳಿಗೆ ಇಂತಹ ಆಫ್-ರೋಡ್ ವಾಹನಗಳು ಪ್ರವೇಶಿಸದಂತೆ ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.
ಈ ಹಿಂದೆ ಹಾಸನದ ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಇಂತಹ ಆಫ್-ರೋಡಿಂಗ್ ನಡೆಸುತ್ತಿದ್ದವರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸಿ, 40ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿತ್ತು. ಆದ್ದರಿಂದ ನಾಳೆ ಈ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
