

ಕಾರ್ಕಳ, ಆ.13: ಜೀವನದಲ್ಲಿ ಒಂದು ಬಾರಿಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ವಿಮಾನವನ್ನೇ ಚಲಾಯಿಸಬೇಕು ಎನ್ನುವ ಕನಸನ್ನು ಕಾಣುವವರು ಅತ್ಯಂತ ವಿರಳ. ಅತ್ಯಂತ ಕಠಿಣ ಪರೀಕ್ಷೆ ಹಾಗೂ ತರಬೇತಿಯನ್ನು ಪೂರ್ಣಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕಠಿಣ ಪರಿಶ್ರಮ ಹಾಗೂ ಸಾಧನೆ ಮಾಡಿದರೆ ಎನ್ನನ್ನೂ ಸಾಧಿಸಬಹುದೆಂದು ಉಡುಪಿ ಜಿಲ್ಲೆಯ ಕಾರ್ಕಳದ ಯುವತಿ ಸಾಧಿಸಿ ತೋರಿಸಿದ್ದಾರೆ.
ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಕಾರ್ಕಳ ತಾಲೂಕಿನ ಕೌಡೂರು ವಾಸಿ ಶೈನಿ ಅಸ್ಮಾಸಲ್ಡಾನ ಎನ್ನುವ ಯುವತಿ ವಿಮಾನದ ಪೈಲಟ್ ಆಗಿ ಲೈಸನ್ಸ್ ಪಡೆದು ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಠಿಣ ಪರೀಕ್ಷೆ ಹಾಗೂ ತರಬೇತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡು ಉಡುಪಿ ಜಿಲ್ಲೆಯಿಂದ ಈ ಸಾಧನೆ ಮಾಡಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ದಾನ ಮತ್ತು ಮರಿಯಾ ಗ್ರೆಟ್ಟಾ ಸಲ್ದಾನ ಅವರ ಪುತ್ರಿಯಾಗಿರುವ ಶೈನಿ, ತಮ್ಮ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣವನ್ನು ಕಾರ್ಕಳದ ಕ್ರೈಸ್ಟ್ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದರು. ಬಾಲ್ಯದಿಂದಲೇ ವಿಮಾನಯಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಂಡಿದ್ದರು. ತಾನು ವಿಮಾನದ ಪೈಲಟ್ ಆಗಲೇಬೇಕು ಎಂದು ಪಣತೊಟ್ಟು ತಾನು ಕಂಡ ಕನಸು ನನಸಾಗಬೇಕು ಎನ್ನುವ ನಿಟ್ಟಿನಲ್ಲಿ ಅಚಲ ಶ್ರದ್ದೆ ಹಾಗೂ ಕಠಿಣ ಪರಿಶ್ರಮಪಟ್ಟರು. ಪೈಲಟ್ ಆಗುವ ಕನಸಿಗೆ ಅಡಿಪಾಯ ಹಾಕಲು ಬೆಂಗಳೂರಿನಲ್ಲಿ ಇಂದಿರಾ ಗಾಂಧಿ ರಾಷ್ಟಿçÃಯ ಉಡಾನ್ ಅಕಾಡೆಮಿ ವತಿಯಿಂದ ನಡೆದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯನ್ನು ಬರೆದು ಕಠಿಣ ತರಬೇತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡರು. ತದನಂತರ 2023ರ ಆಗಸ್ಟ್ನಿಂದ ಉತ್ತರ ಪ್ರದೇಶದ ಫುರ್ಸತ್ಗಂಜ್ನಲ್ಲಿರುವ ಅತ್ಯಂತ ಕಠಿಣವಾದ ವೃತ್ತಿಪರ ಪೈಲಟ್ ತರಬೇತಿಯನ್ನು ಆರಂಭಿಸಿದರು.
ತರಬೇತಿಯ ಎಲ್ಲಾ ಹಂತಗಳನ್ನು ಅತ್ಯುತ್ತಮವಾಗಿ ಪೂರ್ಣಗೊಳಿಸಿ ಇದೀಗ ಅಧಿಕೃತವಾಗಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದಿದ್ದಾರೆ.
ವಿಮಾನಯಾನ ಕ್ಷೇತ್ರದಲ್ಲಿ ಶೈನಿ ಸಲ್ದಾನಾ ಮಾಡಿರುವ ಸಾಧನೆ ನಿಜಕ್ಕೂ ಅದ್ವಿತೀಯ. ಕಲಿಯಬೇಕು ಎನ್ನುವ ಅಗಾಧ ಹಂಬಲ ಹಾಗೂ ಮಗಳ ಕಲಿಕೆಗೆ ಪೋಷಕರ ಬೆಂಬಲ,ಪ್ರೋತ್ಸಾಹ ನೀಡಿದ ಹಿನ್ನಲೆಯಲ್ಲಿ ಕರಾವಳಿಯ ಹೆಮ್ಮೆಯ ಹೆಣ್ಣುಮಗಳ ಈ ಸಾಧನೆ ಜಿಲ್ಲೆಯ ಯುವತಿಯರಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
