

ಕಾರ್ಕಳ, ಆ.13: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೆ ಕಾರ್ಕಳ ಪುರಸಭೆ ಆಡಳಿತವು ಕಸ ವಿಲೇವಾರಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಇದರ ಫಲವಾಗಿ ಕಾರ್ಕಳ ಪುರಸಭಾ ನಗರವ್ಯಾಪ್ತಿಯಲ್ಲಿರುವ ವಾಸ್ತವ್ಯದ ಮನೆ, ವ್ಯಾಪಾರ ವ್ಯವಹಾರ ಮಳಿಗೆಗಳಿಂದ ಉತ್ಪತ್ತಿಯಾಗುವ ಕಸ ಸಮರ್ಪಕವಾಗಿ ವಿಲೇವಾರಿಯಾಗದೇ ರಸ್ತೆಯ ಬದಿಯಲ್ಲಿ ಶೇಖರಣೆಯಾಗಿ ಗಬ್ಬುನಾತ ಬೀರುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಪುರಸಭೆ ತಕ್ಷಣವೇ ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆಗ್ರಹಿಸಿದ್ದಾರೆ.
ಕಾರ್ಕಳ ಪುರಸಭೆಯು ಕಸ ವಿಲೇವಾರಿ ಬಗ್ಗೆ ನಿಗಧಿತ ಶುಲ್ಕವನ್ನು ಮನೆ ತೆರಿಗೆ ಹಾಗೂ ವ್ಯಾಪಾರ ತೆರಿಗೆಯನ್ನು 5% ರಿಬೇಟ್ ನೀಡುತ್ತೇವೆ ಎನ್ನುವ ಭರವಸೆಯೊಂದಿಗೆ ಮುಂಗಡವಾಗಿ ಸ್ವೀಕರಿಸುವ ಸಂಧರ್ಭದಲ್ಲಿಯೇ ಸಂಪೂರ್ಣವಾಗಿ ಪಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಸೇವೆಯನ್ನು ಒದಗಿಸುವ ಜವಾಬ್ದಾರಿ ಪುರಸಭೆಗೆ ಇರುತ್ತದೆ. ಆದರೇ ಕಾರ್ಕಳ ಪುರಸಭೆ ಕಸ ವಿಲೇವಾರಿಯಲ್ಲಿ ಅನುಸರಿಸಬೇಕಾದ ವಿಂಗಡಣೆಗಳಾದ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕ್ಯಾರ್ ತ್ಯಾಜ್ಯ ವಿಂಗಡಣೆಯ ಸಂಪೂರ್ಣ ಜವಾಬ್ದಾರಿಯನ್ನು ನಾಗರೀಕರ ಮೇಲೆ ಹೊರಿಸಿ ತನ್ನ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುತ್ತಿದೆ. ಇದರಿಂದ ಕಸ ವಿಲೇವಾರಿಯಾಗದೇ ಜನ ತೊಂದರೆ ಪಡುತ್ತಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಮೇಲೆ ಉಲ್ಲೇಖಿತ ಪ್ರಕರಣದಲ್ಲಿ ಮಾಡಿರುವ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿರುವ ವಿಷಯಗಳು ಹಾಗೂ ಘನ ವಸ್ತುಗಳ ನಿರ್ವಹಣೆ ನಿಯಮಗಳು 2026 ರಲ್ಲಿ ನಿರ್ವಹಿಸಬೇಕಾದ ಮಾನದಂಡ ಹಾಗೂ ನಿಯಮಗಳನ್ನು ಪುರಸಭೆ ಸಂಪೂರ್ಣವಾಗಿ ನಿರ್ಲಕ್ಷಿಸಿ ಜನ ಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಈಗಾಗಲೇ ಕಸ ವಿಲೇವಾರಿ ಘಟಕದಲ್ಲಿ ಆಗಿರುವ ಅಗ್ನಿ ಅವಘಡದ ನೆಪದಲ್ಲಿ ಸದ್ರಿ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಕಾರ್ಕಳ ಪೇಟೆಯಲ್ಲಿ ಅಲ್ಲಲ್ಲಿ ಕಸ ತುಂಬಿ ಹೋಗಿದ್ದು, ಬೀದಿನಾಯಿಗಳು ಅದನ್ನು ಎಳೆದು ರಸ್ತೆಗೆ ಹಾಕುತ್ತಿರುವುದರಿಂದ ಪರಿಸರದಲ್ಲಿ ದುರ್ನಾತ ಉಂಟಾಗಿ ರೋಗ ರುಜಿನಗಳು ಹರಡುವ ಸಾದ್ಯತೆ ಇರುತ್ತದೆ. ಕಾರ್ಕಳ ಪುರಸಭೆಯ ಸದ್ಯದ ಪರಿಸ್ಥಿತಿಯೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಜನರ ಈ ಸಮಸ್ಯೆಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಕಾರ್ಕಳ ಪುರಸಭೆಯ ಆಡಳಿತಾಧಿಕಾರಿಯಾಗಿರುವ ಕುಂದಾಪುರ ಉಪವಿಭಾಗಧಿಕಾರಿಯವರು ಕೂಡಲೇ ಸ್ಪಂದಿಸಿ ಕಸ ವಿಲೇವಾರಿ ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ತಪ್ಪಿದಲ್ಲಿ ಪುರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ರವೀಂದ್ರ ಮೊಯ್ಲಿ ಎಚ್ಚರಿಸಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
