

ಬೆಂಗಳೂರು,ಸೆ.27: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸಂಬAಧಿಸಿದAತೆ ಸರ್ಕಾರ ರಚಿಸಿರುವ ನೂತನ ವಿಶೇಷ ತನಿಖಾ ತಂಡದ ಕೆಲ ಅಧಿಕಾರಿಗಳ ನೇಮಕಾತಿ ಕುರಿತು ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದಕ್ಷ ಅಧಿಕಾರಿಗಳ ಎಸ್‌ಐಟಿ ತಂಡ ರಚನೆಗೆ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಎಸ್‌ಐಟಿ ತಂಡದ ರಚನೆ, ಅಧಿಕಾರಿಗಳ ಹಿನ್ನೆಲೆ ಹಾಗೂ ಪ್ರಕರಣದ ಇತ್ತೀಚಿನ ಬೆಳವಣಿಗೆಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸರ್ಕಾರ ಕೆಲ ಹಿರಿಯ ಅಧಿಕಾರಿಗಳನ್ನು ಮಾತ್ರ ಒಳಗೊಂಡ ಎಸ್‌ಐಟಿ ರಚಿಸಿದೆ ಹೊರತು ಇದು ಪೂರ್ಣ ಪ್ರಮಾಣದ ತಂಡವಾಗಿಲ್ಲ. ಡಿಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸೇರಿದಂತೆ ಗ್ರೌಂಡ್ ಮಟ್ಟದ ಅಧಿಕಾರಿಗಳ ನೇಮಕ ಇನ್ನೂ ಬಾಕಿಯಿದೆ ಎಂದು ಗಿರೀಶ್ ಮಟ್ಟಣ್ಣವರ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಕಳಂಕರಹಿತ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕಾಗಿತ್ತು. ಆದರೆ, ತಂಡದಲ್ಲಿರುವ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಹಾಗೂ ಲೋಕಾಯುಕ್ತಕ್ಕೆ ಸಂಬAಧಿಸಿದ ಆರೋಪಗಳು ಕೇಳಿಬಂದಿವೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗದAತೆ ಆ ಅಧಿಕಾರಿಗಳನ್ನು ಬದಲಾಯಿಸಬೇಕೆಂದು ವಕೀಲರ ಮೂಲಕ ರಾಜ್ಯ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು (ಡಿಜಿ-ಐಜಿಪಿ) ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಲಿಖಿತ ಪತ್ರ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಂಡದಲ್ಲಿರುವ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ನಿಶಾ ಜೇಮ್ಸ್ ಅವರ ಕಾರ್ಯಕ್ಷಮತೆ ಹಾಗೂ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ಗಿರೀಶ್ ಮಟ್ಟಣ್ಣವರ್, ಇವರಂತಹ ಅಧಿಕಾರಿಗಳಿರುವುದು ಸಮಾಧಾನಕರ ಸಂಗತಿ ಎಂದಿದ್ದಾರೆ. ರಾಜಕೀಯ ಒತ್ತಡಗಳಿಗೆ ಮಣಿಯದೇ ಸ್ವತಂತ್ರವಾಗಿ ತನಿಖೆ ನಡೆಸುವ ಸಾಮರ್ಥ್ಯ ಹೊಂದಿರುವ ಸುಧೀರ್ ಕುಮಾರ್ ರೆಡ್ಡಿ ಅವರಂತಹ ಹಿರಿಯ ಅಧಿಕಾರಿಗೆ ಎಸ್‌ಐಟಿ ಮುಖ್ಯಸ್ಥ ಹುದ್ದೆ ನೀಡಿದ್ದರೆ ತನಿಖೆಗೆ ಮತ್ತಷ್ಟು ಶಕ್ತಿ ಮತ್ತು ಪಾರದರ್ಶಕತೆ ಬರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರು ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ಈ ಪ್ರಕರಣದಲ್ಲಿ ಸೌಜನ್ಯ ಪರ ಹೋರಾಟಗಾರರನ್ನು ಲೇವಡಿ ಮಾಡಿದ್ದ ವ್ಯಕ್ತಿಗಳೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿದಾಗ ಇಂತಹ ಭೇಟಿಗಳು ಸಾರ್ವಜನಿಕರಲ್ಲಿ ನಾನಾ ಸಂಶಯಗಳನ್ನು ಹುಟ್ಟುಹಾಕುತ್ತವೆ ಎಂದು ಹೇಳಿದ ಅವರು, ಈ ಬಗ್ಗೆ ಸೂಕ್ತ ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ವರ್ಮಾ ಕಮಿಟಿ ಶಿಫಾರಸುಗಳ ಪ್ರಕಾರ ಸಂತ್ರಸ್ತ ಮಹಿಳೆಯ ಅಥವಾ ಆಕೆಯ ಕುಟುಂಬದ ತೇಜೋವಧೆ ಮಾಡುವುದು ಕಾನೂನುಬಾಹಿರವಾಗಿದೆ. ಆದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ಸೌಜನ್ಯ ಹಾಗೂ ಆಕೆಯ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವ ಪೊಲೀಸರ ಕಾರ್ಯವೈಖರಿಯನ್ನ ಖಂಡಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
