

ನವದೆಹಲಿ, ಸೆ. 28: ಬ್ಯಾಂಕ್ ಉದ್ಯೋಗಿಗಳ ವಿವಿಧ ಬೇಡಿಕೆಗಳಿಗೆ ಕುರಿತಂತೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಹಾಗೂ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ನಡೆದ ಸುದೀರ್ಘ ಮಾತುಕತೆ ಯಶಸ್ವಿಯಾಗಿದ್ದು, ಇಂದಿನಿಂದ (ಸೆ.28) ನಡೆಯಬೇಕಿದ್ದ 3 ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯಲಿದ್ದು, ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಸಮಾಧಾನ ಸಿಕ್ಕಂತಾಗಿದೆ.
ವಾರದಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುಎಫ್‌ಬಿಯು ಸೆಪ್ಟೆಂಬರ್ 28 ರಿಂದ 30 ರವರೆಗೆ ಮುಷ್ಕರಕ್ಕೆ ಕರೆ ನೀಡಿತ್ತು. ಭಾನುವಾರ ನಡೆದ ಮಹತ್ವದ ಸಭೆಯಲ್ಲಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಕುರಿತು ಧನಾತ್ಮಕ ಒಪ್ಪಂದಕ್ಕೆ ಬರಲಾಗಿದ್ದು, ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ನಡೆದ ಪ್ರಮುಖ ಒಪ್ಪಂದಗಳು:
ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸುವ ಬೇಡಿಕೆಯ ಕುರಿತು ಚರ್ಚಿಸಲು ಐಬಿಎ ಮತ್ತು ಯುಎಫ್‌ಬಿಯು ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ತಕ್ಷಣವೇ ರಚಿಸಲಾಗುತ್ತದೆ. ಈ ಸಮಿತಿಯು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು, ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಎಲ್ಲರಿಗೂ ಸಮ್ಮತವಾಗುವ ಪರಿಹಾರ ಕಂಡುಕೊಳ್ಳಲಿದೆ. ಸ್ಕೇಲ್ IV ಮತ್ತು ಅದಕ್ಕಿಂತ ಹೆಚ್ಚಿನ ಅಧಿಕಾರಿಗಳಿಗೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆ ಕುರಿತು ಒಕ್ಕೂಟಗಳು ಎತ್ತಿರುವ ಆಕ್ಷೇಪಣೆಗಳನ್ನು ಪರಿಹರಿಸಲು, ಐಬಿಎ ಅಗತ್ಯ ಮಾರ್ಪಾಡುಗಳನ್ನು ಸರ್ಕಾರಕ್ಕೆ ಪ್ರಸ್ತಾಪಿಸಲಿದೆ.
2024ರ ಮಾರ್ಚ್ 8 ಸಭೆಯ ನಡಾವಳಿಯಲ್ಲಿ ಪಟ್ಟಿ ಮಾಡಲಾದ ಬಾಕಿ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಚರ್ಚಿಸಿ ಇತ್ಯರ್ಥಪಡಿಸಲು ಎರಡೂ ಕಡೆಯವರು ಸಮ್ಮತಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವಾಲಯವು ಸಾರ್ವಜನಿಕ ಬ್ಯಾಂಕಿಂಗ್ ಸೇವೆಗಳಿಗೆ ಅಡಚಣೆಯಾಗದಂತೆ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿತ್ತು. ಮುಷ್ಕರ ಹಿಂಪಡೆದಿರುವುದರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಖಾಸಗಿ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸೇವೆಗಳು ಎಂದಿನಂತೆ ದೊರೆಯಲಿವೆ ಎಂದು ಯೂನಿಯನ್ ಫೋರಂ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.






.
.
.
.
.
.
.
.
.
.
.
.
.
.
.
.
.
.
.
.
