

ಬೆಂಗಳೂರು,ಸೆ.29 : ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಂತರ್ ಸಚಿವಾಲಯದ ಅಧಿಕಾರಿಗಳ ತಂಡ ಅಕ್ಟೋಬರ್ ಮೊದಲ ವಾರ ರಾಜ್ಯಕ್ಕೆ ಆಗಮಿಸಲಿದೆ. ಅ.3ರಿಂದ 6ರವರೆಗೆ ರಾಜ್ಯದ ವಿವಿಧ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವಸ್ತುಸ್ಥಿತಿಯ ಪರಿಶೀಲನೆ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಸಮಿತಿ ಮೂರು ತಂಡಗಳಲ್ಲಿ ರಾಜ್ಯದ ವಿವಿಧೆಡೆ ಬರ ಅಧ್ಯಯನ ನಡೆಸಿ, ನಷ್ಟ ಅಂದಾಜಿಸಲಿದೆ. ಒಟ್ಟು 10 ಸದಸ್ಯರ ಕೇಂದ್ರ ತಂಡದಲ್ಲಿ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ಆಹಾರ ವಿತರಣೆ ಹಾಗೂ ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದಾರೆ. ಅಧಿಕಾರಿಗಳು ಮೂರು ತಂಡಗಳಲ್ಲಿ ಅಧ್ಯಯನ ನಡೆಸಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಹಾನಿಯ ಕುರಿತು ಸ್ಥಳ ಪರಿಶೀಲನೆ ನಡೆಯುತ್ತಿದೆ. ಈ ಪರಿಶೀಲನೆ ಪೂರ್ಣಗೊಂಡ ಬಳಿಕ ಅಂತಿಮ ಮನವಿ ಪತ್ರವನ್ನು ಸಿದ್ಧಪಡಿಸಲಾಗುವುದು .ಈಗಾಗಲೇ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿ ಪತ್ರಗಳ ಆಧಾರದ ಮೇಲೆ ಕೇಂದ್ರದ ತಂಡಗಳು ಪರಿಶೀಲನೆ ನಡೆಸಲಿವೆ. ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿರುವ ಎಲ್ಲ ತಾಲೂಕುಗಳ ಮಾಹಿತಿಯನ್ನು ತಂಡಗಳು ಪಡೆದುಕೊಳ್ಳಲಿವೆ. ಕೆಲವು ಪ್ರದೇಶಗಳಿಗೆ ತಂಡಗಳು ಖುದ್ದಾಗಿ ಭೇಟಿ ನೀಡಲಿದ್ದು, ಇನ್ನು ಕೆಲವು ಪ್ರದೇಶಗಳ ಮಾಹಿತಿಯನ್ನು ಸಂಬAಧಿಸಿದ ಜಿಲ್ಲಾಧಿಕಾರಿಗಳಿಂದ ಪಡೆಯಲಿವೆ.
ನಾವು ನೀಡಿರುವ ಮಾಹಿತಿಯನ್ನು ಹಾಗೂ ತಂಡಗಳು ಪರಿಶೀಲಿಸುವ ಪ್ರದೇಶಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವರು ಪರಿಶೀಲಿಸಲಿದ್ದಾರೆ. ಕೇಂದ್ರದ ತಂಡಗಳಿಗೆ ತಮ್ಮದೇ ಆದ ಮಾರ್ಗಸೂಚಿಗಳಿವೆ. ನಾವು ಕೂಡ ಅದೇ ಮಾರ್ಗಸೂಚಿಗಳನ್ನು ಅನುಸರಿಸಿದ್ದೇವೆ. ಎರಡೂ ಹೊಂದಿಕೆಯಾಗಬೇಕು. ಮಾರ್ಗಸೂಚಿಗಳಿಗೆ ಒಳಪಡದ ತಾಲೂಕುಗಳನ್ನು ಒತ್ತಡವಿದ್ದರೂ ನಾವು ಬರಪೀಡಿತ ಎಂದು ಘೋಷಿಸಿಲ್ಲ. ಎರಡೂ ಒಂದೇ ಮಾನದಂಡದ ಆಧಾರದಲ್ಲಿರುವುದರಿಂದ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.






.
.
.
.
.
.
.
.
.
.
.
.
.
.
.
.
.
.
.
.
