ಬಿಜಾಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ರಾಜ್ಯ ಕಾರ್ಯಪಡೆಯ ಮುಖ್ಯ ಕಾನ್ಸ್ಟೇಬಲ್ ಭರತ್ ಲಾಲ್ ಸಾಹು ಮತ್ತು ಕಾನ್ಸ್ಟೇಬಲ್ ಸತೇರ್ ಸಿಂಗ್ ಅವರು ಕರ್ತವ್ಯದ ವೇಳೆ ಹುತಾತ್ಮರಾಗಿದ್ದಾರೆ.
ತಾರೆಮ್ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಿಮಾರ್ಕಾ ಅರಣ್ಯದಲ್ಲಿ ಕಳೆದ ರಾತ್ರಿ ಐಇಡಿ ಸ್ಫೋಟ ಸಂಭವಿಸಿದೆ. ಭದ್ರತಾ ಪಡೆ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಪೈಪ್ ಬಾಂಬ್ ಸ್ಫೋಟಗೊಂಡಿದೆ.
ಪುರುಷೋತ್ತಮ್ ನಾಗ್, ಕೋಮಲ್ ಯಾದವ್, ಸಿಯಾರಾಮ್ ಸೋರಿ ಮತ್ತು ಸಂಜಯ್ ಕುಮಾರ್ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ರವಾನಿಸಲಾಗಿದ್ದು, ಗಾಯಗೊಂಡ ಎಸ್ಟಿಎಫ್ ಯೋಧರಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.