ಬೆಂಗಳೂರು : ನನ್ನ ವಿರುದ್ಧದ ನಡೆಯುತ್ತಿರುವ ರಾಜಕೀಯ ಹೋರಾಟದ ವಿರುದ್ಧ ಹೋರಾಟ ಮಾಡಲು ನನಗೆ ಶಕ್ತಿಯಿದೆ, ರಾಜ್ಯದ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಇಂದು ಹೈ ಕೋರ್ಟ್ ತೀರ್ಪಿನ ಬಳಿಕ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ ಬಳಿಕ ವಿಸ್ತೃತವಾದ ಪ್ರತಿಕ್ರಿಯೆ ನೀಡುತ್ತೇನೆ. ನ್ಯಾಯಾಲಯವು ಸೆಕ್ಷನ್ ೨೧೮ ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ ೧೭ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ ಎಂದರು.
ನಾವು 136 ಸ್ಥಾನ ಗೆದ್ದರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದ್ದಾರೆ.ದುಡ್ಡು ಕೊಟ್ಟು ಶಾಸಕರನ್ನು ಸೆಳೆಯುಕ್ಕೆ ಪ್ರಯತ್ನ ಮಾಡಿದ್ದರು ಆದರೆ ನಮ್ಮ ಶಾಸಕರು ಬಿಜೆಪಿಯವರ ಆಮಿಷಕ್ಕೆ ಒಳಗಾಗಲಿಲ್ಲ .ಅಲ್ಲದೆ ನಮ್ಮ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಇಡೀ ದೇಶದಲ್ಲಿ ಮಾಡಿದಂತೆ ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಬೇಕು, ಕಪ್ಪು ಮಸಿ ಬಳಿಯಬೇಕು ಎಂದು ಯತ್ನಿಸಿದ್ದಾರೆ ಎಂದರು.
ನರೇಂದ್ರ ಮೋದಿ ನೇತೃತ್ವ ಸರ್ಕಾರ ಇಡಿ ದೇಶದಲ್ಲಿ ಸೇಡಿನ ರಾಜಕೀಯ ಮಾಡುತ್ತಿದೆ. ದೇಶದಲ್ಲಿರುವ ವಿಪಕ್ಷಗಳ ಸರ್ಕಾರಗಳ ಮೇಲೆ ಸೇಡಿನ ರಾಜಕೀಯ ಮಾಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಯಾವಾಗಲೂ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಹಣಬಲದಿಂದ ಅವರು ಅಧಿಕಾರಕ್ಕೆ ಬಂದಿದ್ದಾರೆ.
ನಾನು ಈಗಲೂ ಹೇಳುತ್ತಿದ್ದೇನೆ ಈ ಒಂದು ಹಗರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಆದೇಶ ಕೊಟ್ಟ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೀನಿ ಅಂತ ಅಲ್ಲ ಎಂದರು.







in 
