ಮಂಗಳೂರು : ಕಾರ್ಕಳ ಮೂಲದ ಬಾಣಂತಿ ಮಹಿಳೆಯೊಬ್ಬರು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ತಾಲೂಕು ಮುನಿಯಾಲಿನ ರಂಜಿತಾ (28) ಮೃತಪಟ್ಟವರು. ರಂಜಿತಾ ಹೆರಿಗೆಗೆಂದು ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಅ.28ಕ್ಕೆ ದಾಖಲಾಗಿದ್ದರು. ಅವರಿಗೆ ಅ.30ಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೆರಿಗೆಯಾಗಿತ್ತು. ಮಗುವನ್ನು ಎನ್ಐಸಿಯುನಲ್ಲಿ ದಾಖಲಿಸಲಾಗಿತ್ತು. ಆದರೆ ನ.3ಕ್ಕೆ ಮಗು ಮೃತಪಟ್ಟಿದೆ.
ರಂಜಿತಾ ಅವರು ಗುಣಮುಖರಾಗಿದ್ದ ಹಿನ್ನಲೆಯಲ್ಲಿ ಇಂದು (ಸೋಮವಾರ) ರಂದು ಡಿಸ್ಚಾರ್ಜ್ಗೆಂದು ವೈದ್ಯರು ಸೂಚಿಸಿದ್ದರು. ಮನೆಯವರು ಕೂಡ ಸಿದ್ದರಾಗಿ ಬಂದಿದ್ದರು. ಆದರೆ ರಂಜಿತಾ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
































































































































































































