
ನವದೆಹಲಿ,ಮೇ.11: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ನಡೆದು ಚುನಾವಣಾ ಫಲಿತಾಂಶ ಪ್ರಕಟಿಸಿದ್ದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಅಂಚೆ ಮತಗಳ ಎಣಿಕೆಯಲ್ಲಿನ ಅಕ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಟಿ.ಡಿ. ರಾಜೇಗೌಡ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ಅವರ ಶಾಸಕ ಸ್ಥಾನವನ್ನು ಸದ್ಯಕ್ಕೆ ಮರುಸ್ಥಾಪಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಪೀಠವು, “ಪ್ರಜಾಪ್ರಭುತ್ವದ ಆಶಯಗಳನ್ನು ಯಾರೂ ಹೈಜಾಕ್ ಮಾಡಲು ಬಿಡುವುದಿಲ್ಲ” ಎಂದು ಕಠಿಣವಾಗಿ ಹೇಳಿದೆ. ಅಂಚೆ ಮತಗಳ ಮರು ಎಣಿಕೆಯ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ವ್ಯತ್ಯಾಸಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಮುಂದಿನ ಆದೇಶದವರೆಗೆ ರಾಜೇಗೌಡ ಅವರೇ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು.
ಅಂಚೆ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪರಾಜಿತ ಅಭ್ಯರ್ಥಿ ಜೀವರಾಜ್ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು.
ಕಳೆದ ವಾರ ನಡೆದ ಮರು ಎಣಿಕೆಯಲ್ಲಿ ರಾಜೇಗೌಡರ 255 ಮತಗಳು ಅಸಿಂಧು ಎಂದು ಘೋಷಿಸಲಾಗಿತ್ತು. ಇದರಿಂದ ಜೀವರಾಜ್ ಅವರು 52 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದರು.
ಹೈಕೋರ್ಟ್ ಆದೇಶ ಮತ್ತು ಮರು ಎಣಿಕೆಯ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮರು ಎಣಿಕೆಯ ಸಮಯದಲ್ಲಿ ಬ್ಯಾಲೆಟ್ ಪೇಪರ್‌ಗಳ ಮೇಲೆ ಮಸಿ ಚೆಲ್ಲುವ ಮೂಲಕ ಅಥವಾ ಹೆಚ್ಚುವರಿ ಗುರುತು ಮಾಡುವ ಮೂಲಕ ಮತಗಳನ್ನು ಉದ್ದೇಶಪೂರ್ವಕವಾಗಿ ಅಸಿಂಧುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಪರ ವಕೀಲರು ವಾದಿಸಿದ್ದರು. ಈ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ಒಟ್ಟಿನಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿದ್ದ ಶೃಂಗೇರಿ ಕ್ಷೇತ್ರದ ಫಲಿತಾಂಶದ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದದ್ದು, ಈ ಆದೇಶದ ಪ್ರಶ್ನಿಸಿ ಜೀವರಾಜ್ ಅವರು ಮೇಲ್ಮನವಿ ಸಲ್ಲಿಸಿದರೂ ಅಚ್ಚರಿಯಿಲ್ಲ.



.
.
.
.
.
.
.
.
.
.
.
.
.
.
.
.
.
.
.
.
