
ಕಾರ್ಕಳ,ಮೇ.14: ದೇಶದ ಲಕ್ಷಾಂತರ ವೈದ್ಯಕೀಯ ಶಿಕ್ಷಣ ಆಕಾಂಕ್ಷಿ ಪರೀಕ್ಷಾರ್ಥಿಗಳ ಪರಿಶ್ರಮಕ್ಕೆ ಕೊಳ್ಳಿ ಇಟ್ಟು ಅವರ ಕನಸನ್ನು ಭಗ್ನಗೊಳಿಸಿದ ಸಿಇಟಿ ಪ್ರಶ್ನಾಪತ್ರಿಕೆ ಸೋರಿಕೆ ಹಗರಣಕ್ಕೆ ಪ್ರಧಾನಿ ಮೋದಿ ಸರಕಾರದ ಬಂಡವಾಳಶಾಹೀ ಪ್ರಾಯೋಜಿತ ಬೇಜವಾಬ್ದಾರಿ ಆಡಳಿತವೇ ನೇರ ಕಾರಣವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಮಹತ್ವಾಕಾಂಕ್ಷೆಯ ಸಿಇಟಿ ಯಿಂದ ಗ್ರಾಮೀಣ ಪರಿಸರದ ಕಡು ಬಡವರೂ ವೈದ್ಯರಾಗುವ ಅವಕಾಶವನ್ನು ಪಡೆದಿದ್ದರು. ಆದರೆ ಕೇಂದ್ರ ಬಿಜೆಪಿ ಸರಕಾರ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಪಾರದರ್ಶಕತೆಯ ಹೆಸರಲ್ಲಿ ಸಿಇಟಿ ಯಿಂದ ವೈದ್ಯಕೀಯ ಶಿಕ್ಷಣವನ್ನು ಪ್ರತ್ಯೇಕಿಸಿ 2017ರಲ್ಲಿ ರಾಷ್ಟ್ರ ಮಟ್ಟದಲ್ಲಿ ನೀಟ್-ಯುಜಿಸಿ ರಚಿಸಿ ಬಡ ವೈದ್ಯಕೀಯ ಶಿಕ್ಷಣಾಕಾಂಕ್ಷಿ ಗಳಿಗೆ ದ್ರೋಹ ಬಗೆದಿತ್ತು.
ಆದರೆ ಇದೀಗ ಕೇಂದ್ರ ಸರಕಾರದ ನೀಟ್ ಪರೀಕ್ಷಾ ವ್ಯವಸ್ಥೆ ಹಳಿತಪ್ಪಿ ಹೋಗಿದೆ. ನೀಟ್ ಪರೀಕ್ಷಾ ವ್ಯವಸ್ಥೆಯ ಹೊಣೆ ಹೊತ್ತ ಕೇಂದ್ರ ಸರಕಾರದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಸ್ವೇಚ್ಛಾಚಾರದ ಅತಂತ್ರ ನಡೆ ಒಂದುಕಡೆಯಾದರೆ,ಮತ್ತೊಂದೆಡೆ ಕೆಲವೊಂದು ಖಾಸಗೀ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಪರೀಕ್ಷಾ ನಿರ್ವಹಣೆಯ ಕೆಲಸವನ್ನು ಗುತ್ತಿಗೆ ನೀಡಿರುವುದು ಈ ಮಹಾ ಭ್ರಷ್ಟಾಚಾರದ ದುರಂತಕ್ಕೆ ಕಾರಣ ಎನ್ನಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶವೂ ಸೇರಿ ದೇಶದ ಕೆಲವು ಕಡೆ ನೀಟ್ ಪರೀಕ್ಷಾ ಫಲಿತಾಂಶಗಳಲ್ಲಿ ಕಂಡುಬಂದ ವೈರುದ್ಯಗಳು ಭ್ರಷಾಚಾರದ ಸ್ಪಷ್ಟ ಸಂದೇಶವನ್ನು ನೀಡಿದ್ದವು. ಆದರೆ ಕೇಂದ್ರ ಸರಕಾರ ತನ್ನ ಸ್ವಾರ್ಥಕ್ಕಾಗಿ ಮೌನವಹಿಸಿ ಜನರ ಅರಿವಿಗೆ ಬಾರದಂತೆ ಇದನ್ನು ಮುಚ್ಚಿಹಾಕಿ ವೈದ್ಯಕೀಯ ಶಿಕ್ಷಣಾಕಾಂಕ್ಷಿಗಳಿಗೆ ದ್ರೋಹ ಬಗೆದಿತ್ತು.
ಸಿಇಟಿ ಪರೀಕ್ಷೆಯ ಯಾವುದೇ ಅಕ್ರಮಕ್ಕೆ ಕೇಂದ್ರ ಸರಕಾರ ನೇಮಿಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೇ (NTA) ನೇರ ಹೊಣೆ. ಇದರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನೀಟ್ ಪರೀಕ್ಷಾ ವ್ಯವಸ್ಥೆಯನ್ನು ರದ್ದು ಪಡಿಸಿ ಈ ಹಿಂದಿನಂತೆ ರಾಜ್ಯ ಮಟ್ಟದಲ್ಲಿ ಸಿಇಟಿಗೆ ವೈದ್ಯಯಕೀಯ ಶಿಕ್ಷಣವನ್ನು ಸೇರ್ಪಡೆಗೊಳಿಸಿ ದೇಶದಲ್ಲಿ ಗ್ರಾಮೀಣ ಪರಿಸರದ ಕಡು ಬಡವನ ವೈದ್ಯನಾಗುವ ಕನಸನ್ನು ನನಸಾಗಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
