
ಉಡುಪಿ, ಮೇ. 14:ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಕುರಿತು ಸುಳ್ಳು ಸುದ್ದಿಯನ್ನು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರ ನೇತೃತ್ವದ ನಿಯೋಗವು ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ಸಚಿವರಾಗಿ ಕಾರ್ಯನಿರ್ವಹಿಸಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಇಂತಹ ಸುಳ್ಳು ಸುದ್ದಿಯನ್ನು ಪರೀಶೀಲಿಸದೇ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವುದು ಅಕ್ಷಮ್ಯ ಅಪರಾಧ. ದೇಶಕ್ಕೆ ಇಂದಿರಾ ಗಾಂಧಿಯವರ ಕೊಡುಗೆ ಅಪಾರ. ಅಂತಹ ಮೇರು ನಾಯಕಿಯನ್ನು ಅಪಮಾನ ಮಾಡಿರುವುದು ಶಾಸಕ ಸುನಿಲ್ ಕುಮಾರ್ ಅವರಿಗೆ ಶೋಭೆ ತರುವುದಿಲ್ಲ ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆ, ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಬಾನು ಭಾಸ್ಕರ್, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರಾದ ಪ್ರತಿಮಾ ರಾಣೆ ಹಾಗೂ ರೆಹಮತ್ ಶೇಖ್, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯೆ ಚರಿತ್ರಾ ಎಮ್, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ಅಂಚನ್ ಹಾಗೂ ಸಂಧ್ಯಾ ತಿಲಕ್ರಾಜ್ ಅವರು ಉಪಸ್ಥಿತರಿದ್ದರು



.
.
.
.
.
.
.
.
.
.
.
.
.
.
.
.
.
.
.
.
