
ನವದೆಹಲಿ,ಮೇ.21: ಕೊರೊನಾ ಮಹಾಮಾರಿಯ ಕರಾಳ ದಿನಗಳಿಂದ ಜಗತ್ತು ಹೊರಬಂದಿದ್ದು, ಇದೀಗ ಮತ್ತೊಂದು ಭೀಕರ ಸೂಕ್ಷ್ಮಾಣು ಜೀವಿ ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಆಫ್ರಿಕಾ ಖಂಡದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಮಾರಣಾಂತಿಕ ಎಬೋಲಾ ವೈರಸ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಮಹತ್ವದ ಎಚ್ಚರಿಕೆ ನೀಡಿದ್ದು, ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.
ವೈದ್ಯರ ಪ್ರಕಾರ ಪ್ರಸ್ತುತ ಔಟ್ಬ್ರೇಕ್ ಆಗಿರುವ ಎಬೋಲಾ ಬುಂಡಿಬುಗ್ಯೊ ತಳಿಗೆ ಯಾವುದೇ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಈ ವೈರಸ್ ಸೋಂಕು ತಗುಲಿದರೆ ಸಾವಿನ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಆದರೆ, ಇದು ಕೋವಿಡ್ ಮಹಾಮಾರಿಯಂತೆ ಗಾಳಿಯಲ್ಲಿ ಅತಿ ವೇಗವಾಗಿ ಪೆಂಡಾಮಿಕ್ ಆಗುವ ಸಾಧ್ಯತೆ ತೀರಾ ಕಡಿಮೆ. ಈ ವೈರಸ್ ಮೂಲತಃ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಹರಡಲು ಸೋಂಕಿತರ ರಕ್ತ ಅಥವಾ ಶರೀರದ ದ್ರವಗಳ ನೇರ ಸಂಪರ್ಕ ಅಗತ್ಯವಾಗುತ್ತದೆ.ಸೋಂಕು ತಗುಲಿದ ನಂತರ ಆರಂಭದಲ್ಲಿ ತೀವ್ರ ಜ್ವರ, ತಲೆನೋವು, ಮೈಕೈನೋವು, ವಾಂತಿ ಮತ್ತು ಭೇದಿ ಕಂಡುಬರುತ್ತದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಲಿವರ್ ಮತ್ತು ಶ್ವಾಸಕೋಶದ ವೈಫಲ್ಯ ಸಂಭವಿಸಿ ಸಾವು ಸಂಭವಿಸಬಹುದು.
ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೆ ಕಾಂಗೋ, ಉಗಾಂಡ ಮತ್ತು ಇತರೆ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕಿದೆ. ಸಾರ್ವಜನಿಕರು ಆಫ್ರಿಕಾ ದೇಶಗಳ ಪ್ರವಾಸದ ಬಗ್ಗೆ ಸದ್ಯಕ್ಕೆ ಎಚ್ಚರಿಕೆ ವಹಿಸುವುದು ಉತ್ತಮ



.
.
.
.
.
.
.
.
.
.
.
.
.
.
.
.
.
.
.
.
