
ಉಡುಪಿ,ಜೂ. 23:ಮಕ್ಕಳಿಲ್ಲದ ದಂಪತಿಗೆ ಕಾನೂನುಬಾಹಿರವಾಗಿ ಮಗು ಹಸ್ತಾಂತರಿಸಿದ ಪ್ರಕರಣದಲ್ಲಿ ಕಾರ್ಕಳ ತಾಲೂಕಿನ ಇಬ್ಬರು ಆರೋಪಿಗಳು ಸೇರಿ ನಾಲ್ವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಕಾಮತ್ ನರ್ಸಿಂಗ್ ಹೋಮ್ ವೈದ್ಯ ಉಡುಪಿ ಬನ್ನಂಜೆ ನಿವಾಸಿ ಡಾ. ಕೆ. ಸುರೇಂದ್ರ ಕಾಮತ್ (76) ನೇಜಾರಿನ ಎಸ್. ಪ್ರಕಾಶ್ (50), ಕಾರ್ಕಳ ತಾಲೂಕಿನ ಸೂಡ ಗ್ರಾಮದ ಸಂಪತ್ (22) ಹಾಗೂ ಕಾರ್ಕಳ ತಾಲೂಕಿನ ನಂದಳಿಕೆ ಕೆದಿಂಜೆ ನಿವಾಸಿ ಸುಪ್ರೀತಿ (22) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಸಂತೆಕಟ್ಟೆ ನೇಜಾರಿನಲ್ಲಿ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನುಬದ್ಧ ದತ್ತು ಪ್ರಕ್ರಿಯೆ ಅನುಸರಿಸದೇ ಅನಧಿಕೃತವಾಗಿ ಸಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯಲ್ಲಿ ವೈದ್ಯ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿದ ಮಾಹಿತಿಯ ಮೇರೆಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಜೂ. 19ರಂದು ಸಂತೆಕಟ್ಟೆಯ ಸುಬ್ರಹ್ಮಣ್ಯ ನಗರದಲ್ಲಿರುವ ದಂಪತಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಪರಿಶೀಲನೆ ವೇಳೆ ದಂಪತಿ ಪ್ರಕಾಶ್ ಮತ್ತು ಪೂರ್ಣಿಮಾ, ಒಂದು ತಿಂಗಳ ಹೆಣ್ಣು ಮಗು ಹಾಗೂ ಪೂರ್ಣಿಮಾ ಅವರ ಸಹೋದರಿ ಲಕ್ಷ್ಮಿ ಮನೆಯಲ್ಲಿದ್ದು, ವಿಚಾರಣೆ ವೇಳೆ ಅನುಮಾನಾಸ್ಪದ ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಂಪತಿಗೆ ವಿವಾಹವಾಗಿ 11 ವರ್ಷಗಳಾದರೂ ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ವೇಳೆ ಪರಿಚಯದ ಮೂಲಕ ಆಸ್ಪತ್ರೆಯಲ್ಲಿ ಮಗು ಇರುವ ಮಾಹಿತಿ ತಿಳಿದು ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವನ್ನು ತಮಗೆ ನೀಡುವಂತೆ ವಿನಂತಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ವೈದ್ಯರು ಮಗುವನ್ನು ದಂಪತಿಗೆ ನೀಡಿ, ಜನನ ಪ್ರಮಾಣಪತ್ರ ಸೇರಿದಂತೆ ದಾಖಲೆಗಳನ್ನು ಸಿದ್ಧಪಡಿಸಲು ಸಹಕರಿಸಿದ್ದಾರೆ ಎನ್ನಲಾಗಿದೆ. ಬಳಿಕ ಉಡುಪಿ ನಗರಸಭೆಯಿಂದ ಜನನ ಪ್ರಮಾಣಪತ್ರ ಪಡೆದಿದ್ದು, ಮಗುವಿನ ಜೈವಿಕ ಪೋಷಕರ ಕುರಿತು ದಂಪತಿಗೆ ಯಾವುದೇ ಮಾಹಿತಿ ಇಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮಗು ಹಸ್ತಾಂತರ ಪ್ರಕರಣದಲ್ಲಿ ಆರೋಪಿಗಳು ಲಾಭದ ಉದ್ದೇಶದಿಂದ ಒಳಸಂಚು ರೂಪಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಗುವನ್ನು ಕಳ್ಳಸಾಗಣೆ ಮೂಲಕ ಹಸ್ತಾಂತರಿಸಿರುವ ಆರೋಪದಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
